ಕಿಕ್ಕೇರಿ ಸಮೀಪದ ಗದ್ದೆಹೊಸೂರು ಗ್ರಾಮದ ಕಾಲಭೈರವೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ಸಹಾಯದ ಚೆಕ್ ಅನ್ನು ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ವಿತರಿಸಿದರು. ಎಂ. ವೀರೇಶಪ್ಪ, ರೇಣುಕಾ, ಶೃತಿ ಮತ್ತಿತರರಿದ್ದರು. 
ಜಿಲ್ಲೆ

ಕಾಲಭೈರವೇಶ್ವರ ದೇಗುಲಕ್ಕೆ ಧನ ಸಹಾಯ

ಕಿಕ್ಕೇರಿ: ದೇಗುಲಗಳು ನೆಮ್ಮದಿಯ ತಾಣವಾಗಿದ್ದು, ಯುವ ಮನಸ್ಸುಗಳಲ್ಲಿ ಧಾರ್ಮಿಕ ಭಾವನೆ ಜತೆ ಸುಭದ್ರ ನಾಡು ನಿರ್ಮಿಸಲು ಮುಂದಾಗಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.

ಸಮೀಪದ ಗದ್ದೆಹೊಸೂರು ಗ್ರಾಮದ ಕಾಲಭೈರವೇಶ್ವರ ದೇಗುಲ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 1 ಲಕ್ಷ ರೂ. ಸಹಾಯಧನದ ಚೆಕ್‌ನ್ನು ಇತ್ತೀಚೆಗೆ ಟ್ರಸ್ಟಿಗಳಿಗೆ ವಿತರಿಸಿ ಮಾತನಾಡಿ, ಮಂಜುನಾಥಸ್ವಾಮಿ ಪ್ರಸಾದ ಕಾಣಿಕೆ ಇದಾಗಿದೆ. ಎಲ್ಲರನ್ನೂ ಒಗ್ಗೂಡಿಸಿ ಐಕ್ಯತೆ ಮನೋಭಾವ ಮೂಡಿಸಲು ಒಂದಾಗಿರುವ ದೇಗುಲಗಳನ್ನು ಉಳಿಸಲು ಸ್ಥಳೀಯರು ಮುಂದಾಗಬೇಕು ಎಂದರು.

ಸಂಸ್ಥೆಯು ಗ್ರಾಮ, ವೈಯಕ್ತಿಕ ಅಭಿವೃದ್ಧಿಗಾಗಿ ಪ್ರಗತಿಬಂಧು, ಜ್ಞಾನವಿಕಾಸ, ಸ್ವಸಹಾಯ ಸಂಘಗಳನ್ನು ತೆರೆದಿದೆ. ಸಂಸ್ಥೆ ಇರುವುದು ಸರ್ವಜನರ ಸಬಲೀಕರಣಕ್ಕಾಗಿ. ಸಂಸ್ಥೆ ಯಾವುದೇ ರೀತಿ ಆರ್ಥಿಕ ವ್ಯವಹಾರ ನೆಪದಲ್ಲಿ ಕಿರುಕುಳ ನೀಡುತ್ತಿಲ್ಲ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಸಂಸ್ಥೆ ಜ್ಞಾನವಿಕಾಸ ಬಂಧುಗಳಿಂದ ತಮ್ಮ ಊರಿನ ಅಭಿವೃದ್ಧಿ, ಕೆರೆಕಟ್ಟೆ ಉಳಿಸಲು ಅಭಿಯಾನ ಹಮ್ಮಿಕೊಂಡಿದೆ. ಗ್ರಾಮದ ಸ್ವಚ್ಛತೆ, ದೇಗುಲ ನೈರ್ಮಲ್ಯೀಕರಣಕ್ಕೆ ಮುಂದಾಗಿ. ಹೈನುಗಾರಿಕೆ, ಗುಡಿ ಕೈಗಾರಿಕೆಗೆ ಯುವಕರು ಮುಂದಾಗಿ. ಸಂಸ್ಥೆ ಹಲವು ತರಬೇತಿಗಳನ್ನು ನೀಡುತ್ತಿದ್ದು ಸದ್ಭಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ ಮಾತನಾಡಿ, ಸಂಸ್ಥೆ ಮಹಿಳೆಯರ ಸಬಲೀಕರಣಕ್ಕಾಗಿ ಹಲವರು ಯೋಜನೆಗಳನ್ನು ತಂದಿದ್ದು ಸದಸ್ಯರಿಂದಲೇ ಉಸ್ತುವಾರಿ ಮೂಲಕ ನಡೆಸಲಾಗುತ್ತಿದೆ. ಮಹಿಳೆಯರು ಸ್ವಸಹಾಯ ಸಂಘ ರಚಿಸಿಕೊಂಡು ಆರ್ಥಿಕ ವ್ಯವಹಾರವನ್ನು ಉತ್ತಮವಾಗಿ ನಡೆಸುತ್ತಿದ್ದು, ವದಂತಿಗೆ ಆಸ್ಪದ ನೀಡಬಾರದಾಗಿ ಮನವಿ ಮಾಡಿದರು.

ಸಂಸ್ಥೆ ಮೇಲ್ವಿಚಾರಕಿ ರೇಣುಕಾ, ಸೇವಾ ಪ್ರತಿನಿಧಿ ಶೃತಿ, ಮೇಲ್ವಿಚಾರಕಿ ರಾಣಿ, ಮುಖಂಡರಾದ ಮೊಟ್ಟೆ ಮಂಜು, ಕೃಷ್ಣೇಗೌಡ, ಮಂಜೇಗೌಡ, ಪ್ರಕಾಶ್, ಕುಮಾರ್, ರಾಮೇಗೌಡ, ಚಂದ್ರೇಗೌಡ, ಶೀನಪ್ಪ, ಮಹಿಳಾ ಸಂಘದ ಸದಸ್ಯರು, ಮುಖಂಡರು ಹಾಜರಿದ್ದರು.