ಪ್ಯಾರಾ ಏಷ್ಯಾಡ್ ಗೇಮ್ಸ್ ನಲ್ಲಿ ಪದಕ ಪಡೆದ ಅಂಧ ಕ್ರೀಡಾಪಟುಗಳೊಂದಿಗೆ ಚಿಕ್ಕಮಗಳೂರಿನ ಲೈಫ್‌ಲೈನ್ ಫೀಡ್ಸ್ನ ನಿರ್ದೇಶಕ ಕಿಶೋರ್ ಕುಮಾರ್ ಹೆಗ್ಡೆ. 
ಜಿಲ್ಲೆ

ಅಂಧ ಕ್ರೀಡಾಪಟುಗಳಿಗೆ ಆರ್ಥಿಕ ನೆರವು

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಪ್ಯಾರಾ ಏಷ್ಯಾಡ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚನ್ನದ ಪದಕ ಪಡೆದಿರುವ ಆಶಾ ಕಿರಣ ಅಂದಮಕ್ಕಳ ಶಾಲೆಯ ರಕ್ಷಿತಾರಾಜು ಹಾಗೂ ರಾಧ, ರವಿ, ಲಲಿತ ಅವರಿಗೆ ಪ್ಯಾರಾ ಒಲಂಪಿಕ್ ನಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಹಾಗೂ ಅವರು ಬದುಕುಕಟ್ಟಿಕೊಳ್ಳುವವರೆಗೆ ಅವರ ಎಲ್ಲ ಖರ್ಚುವೆಚ್ಚಗಳನ್ನು ಲೈಫ್‌ಲೈನ್ ಫೀಡ್ಸ್ ಸಂಸ್ಥೆ ವತಿಯಿಂದ ಭರಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಕಿಶೋರ್‌ಕುಮಾರ್ ಹೆಗ್ಡೆ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶೇಷಚೇತನರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆ ಹಾಗೂ ದೇಶಕ್ಕೆ ಕೀರ್ತಿ ತಂದಿರುವುದು ಹೆಮ್ಮೆ ಪಡುವ ವಿಷಯ. ಇಂತಹ ವಿಶೇಷ ಚೇತನರಿಗೆ ಪ್ರೋತ್ಸಾಹ ನೀಡುವುದು ಅತ್ಯಂತ ಪವಿತ್ರ ಕೆಲಸವೆಂದು ಭಾವಿಸಿ ಈ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ಸರಾಸರಿ ಹತ್ತು ಲಕ್ಷ ರೂ. ಖರ್ಚಾಗಲಿದೆ. ನಾಲ್ವರು ವಿದ್ಯಾರ್ಥಿಗಳಿಗೆ ವರ್ಷಕ್ಕೆ ೪೦ ಲಕ್ಷ ರೂ. ವೆಚ್ಚವಾಗಲಿದೆ. ಈ ಮಕ್ಕಳು ಪ್ಯಾರಾ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆಯುವುದರಿಂದ ಹಿಡಿದು ಕ್ರೀಡಾಕ್ರೇತ್ರದಲ್ಲಿ ಸಾಧನೆ ಮಾಡಿ ಉದ್ಯೋಗ ಪಡೆಯುವವರೆಗೂ ಸಂಪೂರ್ಣ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ತರಬೇತಿದಾರ ರಾಹುಲ್ ಮಾತನಾಡಿ, ಕಿಶೋರ್ ಕುಮಾರ್ ಹೆಗ್ಡೆಯವರು ಆರ್ಥಿಕ ನೆರವು ನೀಡಲು ಮುಂದೆ ಬಂದು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಅನು ಕೂಲವಾಗಲಿದೆ. ವಿಶ್ವ ಚಾಂಪಿಯನ್ ಶಿಪ್‌ನಲ್ಲೂ ಭಾಗವಹಿಸಿ ಚಿನ್ನದ ಪದಕ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.
ಚಿನ್ನದ ಪದಕ ವಿಜೇತೆ ರಕ್ಷಿತಾ ರಾಜು ಮತನಾಡಿ, ಕ್ರೀಡೆಯಲ್ಲಿ ಸಾಧನೆ ಮಾಡಲು ನಮ್ಮ ಪ್ರಯತ್ನದ ಜತೆಗೆ ಆರ್ಥಿಕ ನೆರವು ಮುಖ್ಯವಾಗುತ್ತದೆ. ಕಿಶೋರ್ ಕುಮಾರ್ ಹೆಗ್ಡೆ ಅವರು ಆರ್ಥಿಕ ನೆರವು ನೀಡುತ್ತಿರುವುದರಿಂದ ಇನ್ನಷ್ಟು ಸಾಧನೆ ಮಾಡಬಹುದೆಂಬ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ಯಾರಾ ಏಷ್ಯಾಡ್ ಗೇಮ್‌ನ ಬೆಳ್ಳಿ ಪದಕ ವಿಜೇತ ಕ್ರೀಡಾಪಟುಗಳಾದ ರಾಧ, ರವಿ, ಲಲಿತ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಉಪಸ್ಥಿತರಿದ್ದರು.