ಕೊಳ್ಳೇಗಾಲ : ಸಂಕಷ್ಟಕ್ಕೆ ಒಳಗಾದ ಪತ್ರಕರ್ತರ ನೆರವಿಗೆ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಕೊಳ್ಳೇಗಾಲಕ್ಕೆ ಆಗಮಿಸಿದ ವೇಳೆ ಇತ್ತೀಚಿಗೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂಘದ ಸದಸ್ಯರಾದ ಎಂ.ವಸಂತ್‌ಕುಮಾರ್ ಹಾಗೂ ಬಿ. ಕುಮಾರ್ ಅವರಿಗೆ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಯಿಂದ ತಲಾ 5 ಸಾವಿರ ರೂ.ಗಳ ಆರ್ಥಿಕ ನೆರವಿನ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.
ಜಿಲ್ಲಾ ಸಂಘದ ವ್ಯಾಪ್ತಿಯಲ್ಲಿ ಅವರಿಂದ ಸಾಧ್ಯವಾದ ಸಹಾಯ ಮಾಡುತ್ತಾರೆ. ಅದರಾಚೆಗೆ ಕೂಡ ಏನಾದರೂ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳಾಗಿದ್ದರೆ ರಾಜ್ಯ ಸಂಘವು ಕೂಡ ಸ್ಪಂದಿಸುತ್ತದೆ. ಇನ್ನೂ ಅದರಾಚೆಗೆ ಸಮಸ್ಯೆಗಳಾದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಿಸುವ ಕೆಲಸ ಮಾಡಿದ್ದೇವೆ ಎಂದರು.
ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ರಾಜ್ಯ ಸಮಿತಿ ಸದಸ್ಯ ಗೂಳೀಪುರ ನಂದೀಶ್, ಕೊಳ್ಳೇಗಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ಉಪಾಧ್ಯಕ್ಷ ಎಂ. ಮರಿಸ್ವಾಮಿ ಇದ್ದರು.