ಜಿಲ್ಲೆ

ವೇಷಭೂಷಣ ಖರೀದಿಗೆ ಆರ್ಥಿಕ ನೆರವು

Haveri

ಶಿಗ್ಗಾಂವಿ: ತರಬೇತಿ ಪಡೆದ ಕಲಾವಿದರು ಕಲೆಯನ್ನು ಮುಂದುವರಿಸಿಕೊಂಡು ಹೋಗಲು ವಾದ್ಯ, ವೇಷ ಭೂಷಣಗಳ ಖರೀದಿಗೆ ಅಕಾಡೆಮಿ ಆರ್ಥಿಕ ಸಹಾಯ ಮಾಡಲು ತೀರ್ಮಾನ ಕೈಗೊಂಡಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಬಿ. ಮಂಜವ್ವ ಜೋಗತಿ ಹೇಳಿದರು.

ತಾಲೂಕಿನ ಬಾಡ ಗ್ರಾಮದ ಕನಕ ಕಲಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಐದು ದಿನಗಳ ಚರ್ಮವಾದ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಬಿರದಲ್ಲಿ ಇಬ್ಬರು ಹೆಣ್ಣುಮಕ್ಕಳು ಯಲ್ಲಮ್ಮನ ಕೊಡ ಹೊತ್ತು ಜೋಗತಿ ನೃತ್ಯ ಪ್ರದರ್ಶಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕೇವಲ ಜೋಗತಿಯರು, ಮುತ್ತು ಕಟ್ಟಿಕೊಂಡವರು, ದೇವದಾಸಿಯರು, ಯಲ್ಲಮ್ಮದೇವಿ ಸೇವೆ ಮಾಡುವವರೇ ಜೋಗತಿ ನೃತ್ಯ ಮಾಡಬೇಕು ಎನ್ನುವ ಮೂಢನಂಬಿಕೆಯನ್ನು ಜ್ಯೋತಿ, ದೀಪಾ ಅಳಿಸಿ ಹಾಕಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದ್ದಾರೆ. ಇವರು ಈ ಕಲೆ ಮುಂದುವರಿಸಿಕೊಂಡು ಹೋದರೆ ಇತಿಹಾಸದ ಪುಟದಲ್ಲಿ ಶಾಶ್ವತವಾಗಿರುತ್ತಾರೆ ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿದರು.

ತರಬೇತಿ ಪಡೆದ 10 ಜನರ ಆರು ತಂಡಗಳಿಂದ ಡೊಳ್ಳು ಕುಣಿತ, ಸಮಾಳ ವಾದನ, ಕರಡಿ ಮಜಲು, ಹಲಗೆ ವಾದನ, ಜೋಗತಿ ನೃತ್ಯ, ನಂದಿ ಧ್ವಜ ಕುಣಿತ ಪ್ರದರ್ಶನಗೊಂಡಿತು.

ಡಾ. ಶಾಲಿನಿ ರಘುನಾಥ, ಕೊಟ್ರೇಶ ಮಾಸ್ತರ ಬೆಳಗಲಿ, ಚನ್ನವ್ವ ಕಾಕೋಳ, ನಾಗರಾಜ ವೆಂಕೋಜಿ, ಬಂಕಪ್ಪ ಬಾರಿಗಿಡದ, ಸುರೇಶ ಚನ್ನಪ್ಪನವರ, ಮಹಾರುದ್ರಪ್ಪ ಇಟಗಿ, ಶಂಕರ ಅರ್ಕಸಾಲಿ, ಕೇದಾರಪ್ಪ ಬಗಾಡೆ, ಮಹಾಂತೇಶ ಸಂಶಿ, ಕೇದಾರಪ್ಪ ಬಗಾಡೆ, ಶರೀಫ ಮಾಕಪ್ಪನವರ, ಸಿದ್ದು ಮೂಟೆ, ರಾಮಕ್ಕ ಜೋಗತಿ, ಹೇಮಂತಕುಮಾರ ಭಜಂತ್ರಿ ಇತರರಿದ್ದರು.