ಜಿಲ್ಲೆ

ಪಿಕಪ್ ನಾಲೆ ಕಾಮಗಾರಿಗೆ ನೆರವು: ಶಂಭು ಸೇವಾ ಟ್ರಸ್ಟ್‌ನಿಂದ ಸಾಮಾಜಿಕ ಸೇವೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಚಿಕ್ಕಮಂಡ್ಯ ಕೆರೆ ಬಯಲು ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಪಿಕಪ್ ನಾಲೆ ಹೂಳೆತ್ತುವ ಕಾಮಗಾರಿಗೆ ಶಂಭು ಸೇವಾ ಟ್ರಸ್ಟ್ ಆರ್ಥಿಕ ನೆರವು ಒದಗಿಸಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಟ್ರಸ್ಟ್ ಅಧ್ಯಕ್ಷರೂ ಆದ ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ನಾಲೆ ಹೂಳೆತ್ತದ ಪರಿಣಾಮ ಬೇಸಿಗೆ ಹಂಗಾಮಿನಲ್ಲಿ ಬೆಳೆ ಬೆಳೆಯಲು ನೀರಿನ ಅಭಾವ ಎದುರಾಗಿತ್ತು. ಪಿಕಪ್ ನಾಲೆ ಹೂಳು ತುಂಬಿಕೊಂಡು ನೀರು ಹರಿಯದೆ ರೈತರು ಬೆಳೆ ಬೆಳೆಯಲು ಸಂಕಷ್ಟ ಎದುರಿಸುತ್ತಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಟ್ರಸ್ಟ್ ನೆರವಿನೊಂದಿಗೆ ಪಿಕಪ್‌ನ ಹೂಳೆತ್ತುವ ಕೆಲಸ ಮಾಡಲಾಗಿದೆ. ಇನ್ನು ಮುಂದೆ ನೀರಿನ ಅಭಾವ ಎದುರಾಗದು ಎಂದರು.

ಚಿಕ್ಕಮಂಡ್ಯ ಕೆರೆ ಅಕ್ಕಪಕ್ಕದ ಗ್ರಾಮಸ್ಥರ ನೀರಿನ ಸೆಲೆಯಾಗಿತ್ತು. ವರ್ಷವಿಡೀ ತುಂಬಿ ತುಳುಕುತ್ತಿತ್ತು. ಕೆರೆಯನ್ನು ಬಡಾವಣೆಯಾಗಿ ಪರಿವರ್ತಿಸಿದ ನಂತರ ನೀರಿನ ಅಭಾವ ಸೃಷ್ಟಿಯಾಗಿದೆ. ಮಂಡ್ಯ ನಗರಕ್ಕೆ ಹೊಂದಿಕೊಂಡಂತಿರುವ ಜಮೀನು ಈಗಾಗಲೇ ಬಡಾವಣೆಯಾಗಿ ಅಭಿವೃದ್ಧಿಯಾಗಿವೆ. ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದರು.

ಗ್ರಾಪಂ ಸದಸ್ಯ ಬೋರೇಗೌಡ, ಮುಖಂಡರಾದ ಜಗದೀಶ್, ಕೆಂಪೇಗೌಡ, ಭಾಸ್ಕರ್, ಸುರೇಶ್, ಸುನೀಲ್‌ಕುಮಾರ್, ರವಿಕುಮಾರ್, ಶಿವಕುಮಾರ್, ಷಡಕ್ಷರಿ, ಅನಿಲ್‌ಕುಮಾರ್, ರಾಜಪ್ಪ, ಶಶಿಕುಮಾರ್, ಹರೀಶ್, ಪ್ರತಾಪ್, ಶಿವಶಂಕರ್ ಇತರರಿದ್ದರು.