ಗೌರಿಬಿದನೂರಿನಲ್ಲಿ ಪ್ರಗತಿಯಲ್ಲಿರುವ ನಗರೋತ್ಥಾನ ಯೋಜನೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪರಿಶೀಲಿಸಿದರು. ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ಪರಿಸರ ಅಭಿಯಂತರ ಶಿವಶಂಕರ್, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಸದಸ್ಯರಾದ ರಾಜಕುಮಾರ್, ಮಂಜುಳಾ ಇತರರಿದ್ದರು. 
ಜಿಲ್ಲೆ

ಫೈನಾನ್ಸ್‌ಗಳು ನೋಂದಣಿಯಾಗಿಲ್ಲ

ಎನ್.ವೆಂಕಟೇಶ್

ದೂರು ದಾಖಲಾದರೆ ಕಾನೂನು ಕ್ರಮ- ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಎಚ್ಚರಿಕೆ

ಗೌರಿಬಿದನೂರು: ಜಿಲ್ಲೆಯಲ್ಲಿ ಯಾವುದೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಧಿಕೃತವಾಗಿ ನೋಂದಣಿಯಾಗಿಲ್ಲ. ನೋಂದಣಿಯಾಗದೆ ವಹಿವಾಟು ನಡೆಸುತ್ತಿರುವ ಬಗ್ಗೆ ದೂರು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಎಚ್ಚರಿಸಿದರು.

ನಗರದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿರುವ ನಗರೋತ್ಥಾನ ಯೋಜನೆ 4ನೇ ಹಂತದ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಆಗುತ್ತಿರುವ ತೊಂದರೆ ಬಗ್ಗೆ ಜಿಲ್ಲಾಮಟ್ಟದಲ್ಲಿ ಪೊಲೀಸ್, ಸಹಕಾರ ಸಂಘಗಳ ಇಲಾಖೆ, ಲೀಡ್ ಬ್ಯಾಂಕ್, ಗಿರವಿದಾರರು, ಲೇವಾದೇವಿದಾರರ ಸಭೆ ನಡೆಸಲಾಗಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಮೈಕ್ರೋ ಫೈನಾನ್ಸ್‌ಗಳು ಆರ್‌ಬಿಐ ನಿಯಮಾವಳಿಯನ್ವಯ ನೋಂದಣಿಯಾಗಿಲ್ಲ. ಲೇವಾದೇವಿದಾರರು ಹಾಗೂ ಗಿರವಿದಾರರು ಮಾತ್ರ ನೋಂದಣಿಯಾಗಿದ್ದಾರೆ. ಸಮಾಜದ ದೃಷ್ಟಿಯಿಂದ ಮೈಕ್ರೋ ಫೈನಾನ್ಸ್‌ಗಳ ಅಗತ್ಯವಿದೆ. ಆದರೆ ಜನರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಕಿರುಕುಳ ನೀಡಬಾರದು. ಸಾಲ ನೀಡುವವರು ಹಾಗೂ ಪಡೆಯುವವರ ನಡುವೆ ಉತ್ತಮ ಸಂಬಂಧವಿರಬೇಕು. ಸಂಜೆ 6ರಿಂದ ಬೆಳಗ್ಗೆ 9 ಗಂಟೆವರೆಗೆ ಸಾಲ ವಸೂಲಿ ಕರೆ ಮಾಡಬಾರದು. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಬಾರದು ಎಂದರು.

ಗುಣಮಟ್ಟದ ಕಾಮಗಾರಿ: ನಗರದ ವಿವಿಧೆಡೆ ಸಂಚರಿಸಿದ ಜಿಲ್ಲಾಧಿಕಾರಿಗಳು, ರಸ್ತೆ, ಚರಂಡಿ ಹಾಗೂ ಸ್ಮಶಾನ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರು. ಜನತೆಗೆ ತೊಂದರೆಯಾಗದಂತೆ ನೀರು ಮನೆಗಳಿಗೆ ನುಗ್ಗದಂತೆ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ ಎಂದರು.

ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ಪರಿಸರ ಅಭಿಯಂತರ ಶಿವಶಂಕರ್, ನಗರಸಭೆ ಅಧ್ಯಕ್ಷ ಲಕ್ಷ್ಮ್ಮೀನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ನಗರಸಭೆ ಸದಸ್ಯರಾದ ರಾಜಕುಮಾರ್, ಮಂಜುಳಾ ಹಾಗೂ ಸಿಬ್ಬಂದಿ ಇದ್ದರು.

ಹಣ ದ್ವಿಗುಣ ಆಮಿಷಕ್ಕೆ ಬಲಿಯಾಗದಿರಿ

ಪರವಾನಗಿ ಇಲ್ಲದೆ ವಹಿವಾಟು ನಡೆಸುವವರ ವಿರುದ್ಧ ದೂರು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಕಿರು ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಕುಂದುಕೊರತೆ ವಿಭಾಗಕ್ಕೆ ದೂರು ಸಲ್ಲಿಸಬಹುದು. ಹೆಚ್ಚಿನ ಕಿರುಕುಳ ನೀಡುತ್ತಿದ್ದರೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಬಹುದು. ಜನ ಹಣ ದ್ವಿಗುಣಗೊಳಿಸುವ ಆಮಿಷಗಳಿಗೆ ಬಲಿಯಾಗಬಾರದು. ಇತಮಿತಿ ಅರಿತು ಸಾಲ ಮಾಡಬೇಕು ಎಂದು ಪಿ.ಎನ್. ರವೀಂದ್ರ ಸಲಹೆ ನೀಡಿದರು.

3 ಲಕ್ಷ ರೂ.ಗಿಂತ ಹೆಚ್ಚು ಸಾಲ ನೀಡಬಾರದು

ಮೂರು ಲಕ್ಷ ರೂ.ಗಳಿಗಿಂತ ಅಧಿಕ ಸಾಲ ನೀಡಬಾರದು. ಸಾಲ ಪಡೆಯುವ ವ್ಯಕ್ತಿಗೆ ಸಾಲ ತೀರಿಸುವ ಸಾಮರ್ಥ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. ಆದಾಯಕ್ಕೆ ತಕ್ಕಂತೆ ಸಾಲ ನೀಡಬೇಕು. ಅವರ ಸಾಮರ್ಥ್ಯಕ್ಕಿಂತ ಅಧಿಕ ಸಾಲ ನೀಡಬಾರದು. ತಿಂಗಳ ಹಾಗೂ ವಾರ್ಷಿಕ ಬಡ್ಡಿ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಸೂಕ್ತ ಮಾಹಿತಿ ಒದಗಿಸಬೇಕು. ಆರ್‌ಬಿಐ ಸೂಚನೆಯಂತೆ ಸ್ಪರ್ಧಾತ್ಮಕ ದರದಲ್ಲಿ ಬಡ್ಡಿ ಇರಬೇಕು ಎಂದು ಪಿ.ಎನ್. ರವೀಂದ್ರ ತಿಳಿಸಿದರು.