ಜಿಲ್ಲೆ

ಕೈಗಾರಿಕೆಗಳ ಸ್ಥಾಪನೆಗೆ ಹಣಕಾಸು

ಪ್ರಸಿನ್ ಕೆ.ಆರ್

ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜು ಅಲ್ಯುಮಿನಿ ಹಾಲ್‌ನಲ್ಲಿ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕೆಸಿಟಿಯು, ಟೆಕ್ಸಾಕ್ ಹಾಗೂ ಬೆಂಗಳೂರು ಘಟಕ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಒಂದು ದಿನದ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಬೆಂಗಳೂರು ಟೆಕ್ಸಾಕ್ ಅಡ್ವೈಜರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದರಾಜು ಮಾತಾನಾಡಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಹಲವು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಸ್ವಂತ ಉದ್ಯೋಗ ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸಲು ಹಣಕಾಸು ಸಹಾಯ ಮಾರ್ಗದರ್ಶನ ನೀಡುವುದು ಪ್ರಮುಖ ಉದ್ದೇಶವಾಗಿದೆ. ಇದರ ಸದುಪಯೋಗವನ್ನು ಪಡೆದು ಸಣ್ಣ ಕೈಗಾರಿಕೆ ಅಥವಾ ಬೃಹತ್ ಕೈಗಾರಿಕೆ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಎಂಎಸ್‌ಎಂಇಗಳ ಕಾರ್ಯದಕ್ಷತೆಯ ಅರಿವು ಮೂಡಿಸುವ ಮತ್ತು ಇದರ ಪ್ರಯೋಜನ ತಿಳಿಸುವ ಕೆಲಸ ಎಲ್ಲ ಕಡೆ ನಡೆಯುತ್ತಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸಮನ್ವಯ ಮತ್ತು ಸಂಸ್ಥೆಗಳನ್ನು ಬಲಪಡಿಸುವುದು, ತಂತ್ರಜ್ಞಾನ ವೇದಿಕೆಗಳನ್ನು ನಿರ್ಮಿಸುವುದು ಮತ್ತು ಸಂಯೋಜಿಸುವುದು, ಸಂಸ್ಥೆಯ ಸಾಮರ್ಥ್ಯಗಳನ್ನು ಮತ್ತು ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವುದು. ಉತ್ಪನ್ನಗಳನ್ನು ಹೆಚ್ಚಿಸುವುದು ಹಾಗೂ ಹೆಚ್ಚಿದ ಹಸಿರೀಕರಣ ಮತ್ತು ಉದ್ಯಮಿಗಳು ಭಾಗವಹಿಸುವಿಕೆಯ ಕಡೆಗೆ ಖಾತರಿ ಪಡಿಸುವುದು. ಆನ್‌ಲೈನ್ ವಿವಾದ ಪರಿಹಾರ ಕಾರ್ಯವಿಧಾನ (ಒಡಿಆರ್) ಪ್ರವೇಶವನ್ನು ವಿಸ್ತರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾಲೇಜು ಪ್ರಾಂಶುಪಾಲ ಡಾ.ಎಚ್.ಜೆ.ಅಮರೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಹಾಸನ ಇಂಡಸ್ಟ್ರೀಯಲ್ ಅಸೋಸಿಯೇಷನ್ ಅಧ್ಯಕ್ಷ ಶಿವರಾಮು ಅಧ್ಯಕ್ಷತೆ ವಹಿಸಿದ್ದರು. ಇಂಡಸ್ಟ್ರೀಯಲ್ ಕೇಂದ್ರ ಸಮಿತಿಯ ನಿರ್ದೇಶಕ ಎಚ್.ಎ. ಕಿರಣ್, ಕೈಗಾರಿಕಾ ವಾಣಿಜ್ಯ ಇಲಾಖೆಯ ಮುಖ್ಯಸ್ಥ ವಿ.ಉಮೇಶ್, ಬಿ.ಕೆ.ರವಿಂದ್ರನಾಥ್, ಗೋಪಿನಾಥ್, ಡಾ. ಗೀತಾ ಕಿರಣ್, ಬಿ.ಮೋಹನ್ ಇತರರಿದ್ದರು.