ಶಿವಮೊಗ್ಗ: ನೋಟೀಸ್ ನೀಡದೆ ಲಾರಿ ವಶಕ್ಕೆ ಪಡೆದು ಮತ್ತೊಬ್ಬರಿಗೆ ಬಾಡಿಗೆಗೆ ನೀಡಿದ್ದ ಶಿವಮೊಗ್ಗದ ಫೈನಾನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಸೇವಾ ನ್ಯೂನ್ಯತೆ ಎಸಗಿದ ಕಾರಣಕ್ಕೆ ಲಾರಿ ಮಾಲೀಕನಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೌರಾಪುರ ಅಜ್ಜಂಪುರದ ತಾಲಿಬ್ ಪಾಷಾ ಲಾರಿ ಮಾಲೀಕರಾಗಿದ್ದು, ಶಿವಮೊಗ್ಗದ ಫೈನಾನ್ಸ್‌ವೊಂದರಿಂದ 8.30 ಲಕ್ಷ ರೂ. ಸಾಲ (ಲೋನ್ ಕಂ ಹೈಪೋಥಿಕೇಶನ್) ಪಡೆದಿದ್ದರು. 52 ಕಂತುಗಳ ಮೂಲಕ ಸಾಲ ತೀರಿಸುವ ಒಪ್ಪಂದ ಮಾಡಿಕೊಂಡಿದ್ದರು. ಈ ವೇಳೆ ಆರು ಖಾಲಿ ಚೆಕ್ ಕೊಟ್ಟಿದ್ದರು. ಅಪಘಾತವಾಗಿದ್ದರಿಂದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
2024ರ ಫೆ.29ರಂದು ತಾಲಿಬ್ ಪಾಷಾ ಲಾರಿ ಬಿಡಿಸಿಕೊಂಡು ರಿಪೇರಿಗೆ ಬಿಟ್ಟಿದ್ದರು. ಈ ವೇಳೆ ಫೈನಾನ್ಸ್ ಅವರು ಏಜೆಂಟರ್ ಮೂಲಕ ಲಾರಿ ವಶಕ್ಕೆ ಪಡೆದಿದ್ದು, ಲಾರಿಯನ್ನು ಬೇರೆ ಹೆಸರಿಗೆ ವರ್ಗಾಯಿಸದಂತೆ ತರೀಕೆರೆ ಎಆರ್‌ಟಿಒಗೆ ತಾಲಿಬ್ ಪಾಷಾ ಪತ್ರ ಬರೆದಿದ್ದರು. ನೋಟೀಸ್ ಅಥವಾ ನ್ಯಾಯಾಲಯದ ಆದೇಶ ನೀಡದೆ ಲಾರಿ ಜಪ್ತಿ ಮಾಡಿದ್ದು, ಲೋನ್ ಕಂ ಹೈಪೋಥಿಕೇಶನ್ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಆಯೋಗದ ಮೊರೆ ಹೋಗಿದ್ದರು. ಇದರಿಂದ ಆರ್ಥಿಕ ನಷ್ಟ ಉಂಟಾಗಿದೆ. 1.87 ಲಕ್ಷ ರೂ. ಸಾಲ ಕಟ್ಟಿದ್ದರೂ ಒಪ್ಪಂದಕ್ಕೆ ವಿರುದ್ಧವಾಗಿ ಲಾರಿ ಜಪ್ತಿ ಮಾಡಿ ಮತ್ತೊಬ್ಬರಿಗೆ ಬಾಡಿಗೆ ರೂಪದಲ್ಲಿ ಲಾರಿ ನೀಡಿದ್ದು, ಇದರಿಂದ ಪ್ರತಿದಿನ 1,500 ರೂ. ನಷ್ಟವಾಗುತ್ತಿದೆ ಎಂದು ದೂರಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನು ಒಳಗೊಂಡ ಪೀಠ, ಫೈನಾನ್ಸ್‌ನವರು ಸೇವಾ ನ್ಯೂನ್ಯತೆ ಎಸಗಿರುವುದನ್ನು ಪರಿಗಣಿಸಿ ದೂರನ್ನು ಭಾಗಶಃ ಪುರಸ್ಕರಿಸಿತ್ತು. ತಾಲಿಬ್ ಪಾಷಾ ಅವರಿಗೆ ಆದೇಶವಾದ ದಿನದಿಂದ 45 ದಿನದೊಳಗೆ ಲಾರಿ ನೀಡಬೇಕು. ತಪ್ಪಿದಲ್ಲಿ ಪ್ರತಿದಿನ 1 ಸಾವಿರ ರೂ. ಪಾವತಿಸಬೇಕು. ಮಾನಸಿಕ ವೇದನೆ ಹಾಗೂ ದೂರಿನ ಖರ್ಚು ವೆಚ್ಚಕ್ಕಾಗಿ 20 ಸಾವಿರ ರೂ. ಪಾವತಿಸಬೇಕು. ಇಲ್ಲವಾದಲ್ಲಿ ಈ ಮೊತ್ತಕ್ಕೆ ಶೇ. 12ರಂತೆ ಬಡ್ಡಿ ಸೇರಿಸಿ ನೀಡಬೇಕೆಂದು ಆದೇಶಿಸಿದೆ.