ಮಂಡ್ಯ: ಗ್ರಾಮ ಪಂಚಾಯಿತಿ ವತಿಯಿಂದ ನಿರ್ವಹಿಸಲಾಗುತ್ತಿರುವ ಬೀದಿ ದೀಪ, ಕುಡಿಯುವ ನೀರಿನ ಬೋರ್‌ವೆಲ್ಗಳಿಗೆ ಬಳಕೆಗೆ ಸಂಬಂಧಿಸಿದ ವಿದ್ಯುತ್ ಬಿಲ್ ಅನ್ನು ನಿಗದಿತವಾಗಿ ಪಾವತಿ ಮಾಡಬೇಕು ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ. ನಾರಾಯಣಸ್ವಾಮಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಡನೆ ಆಯೋಜಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯುತ್ ಬಿಲ್ ಅನ್ನು ಸರ್ಕಾರ ಸಮನ್ವಯತೆ ಮಾಡಿಸುತ್ತದೆ ಎಂಬ ಧೋರಣೆಯನ್ನು ಬಿಡಬೇಕು ಎಂದರು.
2023 ಮಾರ್ಚ್‌ನಲ್ಲಿ ಗ್ರಾಮ ಪಂಚಾಯಿತಿಯ ವಿದ್ಯುತ್ ಬಿಲ್ ಸಮನ್ವಯತೆ ಮಾಡಿಸಿದ್ದು, ಈ ಕುರಿತಂತೆ ಚೆಸ್ಕಾಂ ಅವರು ನೀಡುತ್ತಿರುವ ಬಾಕಿ ವಿದ್ಯುತ್ ಬಿಲ್‌ನ ವಿವರವನ್ನು ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಬಹಳಷ್ಟು ನಿರುಪಯುಕ್ತ ಬೋರ್‌ವೆಲ್ ಇರುತ್ತದೆ. ಅವುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ. ಕೆಲವು ಬಾರಿ ಹಳೆಯ ವಿದ್ಯುತ್ ಬಿಲ್ ನ ಮೊತ್ತ ಸೇರಿಕೊಂಡು ಬಿಲ್ ಬರುತ್ತಿರುತ್ತದೆ. ಆದ್ದರಿಂದ ಪರಿಶೀಲಿಸಿ ಹಣ ಪಾವತಿ ಮಾಡಿ ಎಂದು ಕಿವಿಮಾತು ಹೇಳಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜಿಪಂ ಹಾಗೂ ತಾಪಂನಿಂದ ಯೋಜನೆ ರೂಪಿಸಲು ಬೇರೆ ನಿಯಮಗಳಿದ್ದಾರೆ ಉತ್ತಮ. ಎರಡು ಒಂದೇ ರೀತಿಯಾದರೆ ಡುಪ್ಲಿಕೇಷನ್ ಆಗುವ ಸಾಧ್ಯತೆ ಇರುತ್ತದೆ. ಕುಡಿಯುವ ನೀರಿನ ಘಟಕ, ರಸ್ತೆ ಸೇರಿದಂತೆ ವಿವಿಧ ಆಸ್ತಿಗಳ ನಿರ್ವಹಣೆಗೆ ಅವಕಾಶ ನೀಡಬೇಕು. ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನ ಬಳಕೆ ಮಾಡುವ ಸಂದರ್ಭದಲ್ಲಿ ಕೆಲವು ಸ್ಥಳಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಜನಸಂಖ್ಯೆ ಕಡಿಮೆ ಇರುತ್ತದೆ. ಕೆಲವು ಕಡೆ ಹೆಚ್ಚಿರುತ್ತದೆ. ಹೆಚ್ಚು ಜನಸಂಖ್ಯೆ ಇರುವ ಕಡೆ ಕಡಿಮೆ ಜನಸಂಖ್ಯೆ ಇರುವ ಕಡೆ ಬಳಕೆಯಾಗದೆ ಉಳಿಕೆಯಾಗುವ ಅನುದಾನ ಬಳಕೆಗೆ ಸಡಿಲಿಕೆ ಮಾಡಿಕೊಡಬೇಕು. ರಸ್ತೆ ಅಭಿವೃದ್ಧಿಗೆ ಕೇವಲ ಶೇ.10ರಷ್ಟು ಅನುದಾನ ಬಳಕೆಗೆ ಅವಕಾಶವಿದೆ. ಆದರೆ ಇದು ಸಕಾಗುತ್ತಿಲ್ಲ. ಹೆಚ್ಚಿನ ಹಣ ಬಳಕೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಜಿಪಂ ಯೋಜನಾ ನಿರ್ದೇಶಕ ಧನುಷ್, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಣಕಾಸು ಆಯೋಗ ಕಳುಹಿಸಿರುವ ಪ್ರಶ್ನಾವಳಿ ಕುರಿತ ಮಾಹಿತಿ, ಪಂಚಾಯಿತಿ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಾಚರಣೆ, ಹುದ್ದೆಗಳು, ಆಯವ್ಯಯ, ವೆಚ್ಚಗಳ ವಿವರ ರಾಜ್ಯ ಮತ್ತು ಕೇಂದ್ರ ಹಣಕಾಸು ಆಯೋಗದ ಅನುದಾನ, ಹಂಚಿಕೆ, ಬಿಡುಗಡೆ, ಮಾಡಲಾದ ವೆಚ್ಚ ಕುರಿತ ಸಭೆಗೆ ವಿವರಿಸಿದರು.
ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿ, ನೀರು ಸರಬರಾಜು, ಒಳಚರಂಡಿ, ಬೀದಿ ದೀಪಗಳು, ಘನತ್ಯಾಜ್ಯ ನಿರ್ವಹಣೆ, ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ವಿವರವನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣಗೌಡ ಸಭೆಗೆ ತಿಳಿಸಿದರು. ಅಂತೆಯೇ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಅಭಿಪ್ರಾಯ ಮತ್ತು ಸಲಹೆ ನೀಡಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, 5ನೇ ಹಣಕಾಸು ಆಯೋಗದ ಸದಸ್ಯರಾದ ಆರ್.ಎಸ್.ಪೋಂಡೆ, ಮಹಮ್ಮದ್ ಸನಾಉಲ್ಲಾ, ಕಾರ್ಯದರ್ಶಿ ಆರ್. ಸ್ನೇಹಲ್, ಸಮಾಲೋಚಕ ಕೆಂಪೇಗೌಡ, ಸಿ.ಜಿ.ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕೆ.ಯಾಲಕ್ಕಿಗೌಡ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.