ಜಿಲ್ಲೆ

ಕೊನೆಗೂ ಪಾಪನ ಕೆರೆಯ ತ್ಯಾಜ್ಯ ತೆರವು

ಕೊಳ್ಳೇಗಾಲ: ಪಟ್ಟಣದಿಂದ ಬೆಂಗಳೂರು ರಸ್ತೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ (209) ಪಕ್ಕದಲ್ಲಿರುವ ಪಾಪನಕೆರೆಗೆ ಹಾಕಲಾಗಿದ್ದ ತ್ಯಾಜ್ಯವನ್ನು ಭಾನುವಾರ ಕೊನೆಗೂ ನಗರಸಭೆ ತೆರವು ಮಾಡಿಸಿದೆ.


ವಾರ್ಡ್ ನಂ.1 ಅಣಗಳ್ಳಿ ಬಡಾವಣೆ ನಿವಾಸಿಗಳಿಂದ ಸಂಗ್ರಹವಾದ ತಾಜ್ಯವನ್ನು ನಗರಸಭೆ ಸ್ವಚ್ಛತಾ ಸಿಬ್ಬಂದಿ ಇಲ್ಲಿನ ಪಾಪನ ಕೆರೆಗೆ ಸುರಿಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ‘ಪಾಪನಕೆರೆ ಒಡಲಿಗೆ ತ್ಯಾಜ್ಯ’ ಎಂಬ ಶೀರ್ಷಿಕೆಯಡಿ ಈ ಕುರಿತು ನ.3 ರಂದು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.


ಇದರಿಂದ ನಗರಸಭೆಯ ಅಂದಿನ ಪ್ರಭಾರ ಪೌರಾಯುಕ್ತ ಎ.ಟಿ.ಪ್ರಸನ್ನ ಹಾಗೂ ಆರೋಗ್ಯಾಧಿಕಾರಿ ಚೇತನ್ ಎಚ್ಚೆತ್ತುಕೊಂಡರೂ ಕೆರೆಗೆ ಸುರಿದಿದ್ದ ತ್ಯಾಜ್ಯವನ್ನು ತೆರವು ಮಾಡಲು ಮೀನಮೇಷ ಎಣಿಸುತ್ತಿದ್ದರು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅಧಿಕಾರಿಗಳ ವರ್ತನೆಗೆ ಬೇಸತ್ತು ಕೆರೆಯ ಪಕ್ಕದದಲ್ಲಿರುವ ಜಮೀನು ಮಾಲೀಕ ರವಿ ಹಾಗೂ ಸ್ಥಳೀಯರು ಜಿಲ್ಲಾಧಿಕಾರಿಗೆ ಈ ಬಗ್ಗೆ ದೂರು ನೀಡಲು ಮುಂದಾಗಿದ್ದರು.


ತ್ಯಾಜ್ಯ ತೆರವು ಮಾಡದ ಕುರಿತು ನ.12 ರಂದು ‘ಪಾಪನಕೆರೆಯಲ್ಲಿ ಇನ್ನೂ ತೆರವಾಗದ ತ್ಯಾಜ್ಯ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಯನ್ನು ಗಮನಿಸಿದ ನಗರಸಭೆ ಪ್ರಭಾರ ಪೌರಾಯುಕ್ತ ಹಾಗೂ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಅವರು ಕೂಡಲೇ ತ್ಯಾಜ್ಯ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೆರೆಯೊಳಗೆ ಸುರಿದಿದ್ದ ತ್ಯಾಜ್ಯವನ್ನು ಭಾನುವಾರ ಜೆಸಿಬಿ ಹಾಗೂ ಟ್ರಾೃಕ್ಟರ್ ಮೂಲಕ ತೆರವು ಮಾಡಿದ್ದಾರೆ.