ಜಿಲ್ಲೆ

ಕೊನೆಗೂ ಬಲೆಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಬೆಂಗಳೂರಿಗರು

Webdesk - Savina Naik

ಬೆಂಗಳೂರು:  ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಆತಂಕ ಮೂಡಿಸಿರುವ ಚಿರತೆಯನ್ನು, ಬೊಮ್ಮನಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.

ಕಳೆದ ಎರಡು ದಿನಗಳಲ್ಲಿ ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ತಂದೊಡ್ಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸತತ ಕಾರ್ಯಾಚರಣೆ ನಂತರ ಮೂರು ದಿನಗಳ ನಂತರ ಸೆರೆಹಿಡಿದಿದ್ದಾರೆ.  ಅರವಳಿಕೆ ಮದ್ದು ನೀಡಿದ ನಂತರವೂ ಅರೆಪ್ರಜ್ಞಾವಸ್ಥೆಯಲ್ಲಿದ್ದ ಚಿರತೆ ಪಶುವೈದ್ಯರ ಮೇಲೂ ದಾಳಿ ನಡೆಸಿತ್ತು. ಕೊನೆಗೂ ಹರಸಾಹಸಪಟ್ಟು ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆಯೊಂದು ಓಡಾಡಿತ್ತು. ರಾತ್ರಿ 11 ಗಂಟೆಗೆ ಕಾಂಪೌಂಡ್ ಗೋಡೆ ಜಿಗಿದು ಓಡಿದ್ದನ್ನು ಪರಪ್ಪನ ಅಗ್ರಹಾರ ಲಾ ಅಂಡ್ ಆರ್ಡರ್ ಪೊಲೀಸರು ಗಮನಿಸಿದ್ದರು. ಮರುದಿನ ಅಲ್ಲಿ ಚಿರತೆಯ ಹೆಜ್ಜೆಗಳು ಪತ್ತೆಯಾಗಿತ್ತು. ಕಡೆಂಜಾ ಅಪಾರ್ಟ್ಮೆಂಟ್‌ನಲ್ಲಿ ಮಧ್ಯಾಹ್ನದ ಹೊತ್ತಿಗೆ ಚಿರತೆ ಮೆಟ್ಟಿಲು ಹತ್ತಿ ಹೋಗುವುದು ಸಿಸಿ ಟಿವಿಯಲ್ಲೂ ಸೆರೆಯಾಗಿತ್ತು.

ಬೆಂಗಳೂರಿನ ಆನೇಕಲ್ ತಾಲೂಕಿನ ಬೊಮ್ಮನಹಳ್ಳಿಯ ಕೂಡ್ಲು ಗೇಟ್‌ ಬಳಿ‌ ಇರುವ ಕೃಷ್ಣಾ ರೆಡ್ಡಿ ಬಡಾವಣೆಯ ನಿರ್ಮಾಣ ಹಂತದಲ್ಲಿರುವ ಪಾಳು ಬಿದ್ದ ಕಟ್ಟಡದಲ್ಲಿ ಚಿರತೆ ಇರುವಿಕೆ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿದರು.  ಅರವಳಿಕೆ ಇಂಜೆಕ್ಷನ್​ ನೀಡಿದ್ದರು, ಚಿರತೆ ಸೆರೆ ವಿಳಂಭವಾಗಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಇರುವಿಕೆ ಕಂಡು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಆದರೆ ಚುಚ್ಚುಮುದ್ದಿಗೂ ಬಗ್ಗದ ಚಿರತೆ ಕಟ್ಟಡದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜಿಗಿದು ಪರಾರಿಯಾಗುತ್ತಿದೆ. ಚಿರತೆಗೆ ಮೊದಲ ಸುತ್ತಿನ ಅರಿವಳಿಕೆ ನೀಡಲಾಗಿದೆ. ಆದರೆ ಮಂಪರು ಕಡಿಮೆಯಾದಂತೆ ಚಿರತೆ ಕೆಲವೇ ನಿಮಿಷದಲ್ಲಿ ಎಚ್ಚೆತ್ತು ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ದಾಳಿ ಮಾಡಿದ ಬಳಿಕ ಅದು ಬೇಸ್‌ಮೆಂಟ್‌ನಿಂದ ತಪ್ಪಿಸಿಕೊಂಡಿದ್ದು ಬೇರೆ ಮಹಡಿಗೆ ಹೋಗಿದೆ. ದನ್ನು ಬೆನ್ನಟ್ಟಲು ಅಧಿಕಾರಿಗಳು ಮುಂದಾಗಿದ್ದರು. ಕಾರ್ಯಾಚರಣೆಗೆ ಹುಣಸೂರಿನಿಂದ ವನ್ಯ ಜೀವಿ ರಕ್ಷಣಾ ತಂಡ ಆಗಮಿಸಿತ್ತು. ಜತೆಗೆ ವನ್ಯ ಜೀವಿ ಸಂರಕ್ಷಣಾ ವಿಭಾಗದ ಶಾರ್ಪ್ ಶೂಟರ್ಸ್ ಕೂಡಾ ಬಂದಿದ್ದರು. ಸತತ ಕಾರ್ಯಾಚರಣೆ ನಂತರ ಬೆಂಗಳೂರಿನ ಜನರ ನಿದ್ದೆ ಕೆಡಿಸಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.