ಸಿಂಧನೂರು ತಾಲೂಕಿನ ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ. 
ಜಿಲ್ಲೆ

ಕೊನೇ ಭಾಗದ ಭತ್ತಕ್ಕೆ ಬೇಕು ನೀರು

ರುದ್ರಪ್ಪ ವಾಲಿ

ಅಶೋಕ ಬೆನ್ನೂರು ಸಿಂಧನೂರು

ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ಮುಂಗಾರು-ಹಿಂಗಾರು(ಬೇಸಿಗೆ) ಬೆಳೆ ಬೆಳೆಯುವಷ್ಟು ನೀರು ಸಂಗ್ರಹವಿದೆ ಎನ್ನುವ ಹುಮ್ಮಸ್ಸಿನಲ್ಲಿದ್ದ ರೈತರಿಗೆ ಮಾರ್ಚ್ ಅಂತ್ಯಕ್ಕೆ ನೀರಿನ ಕೊರತೆ ಎದುರಾಗುವ ಆತಂಕ ಶುರುವಾದ ಬೆನ್ನಲ್ಲೇ ಇನ್ನೂ ಕೇವಲ ಐದೇ ದಿನ ನಾಲೆಗೆ ನೀರು ಹರಿಯಲಿದ್ದು ಆ ನೀರನ್ನು ಕೊನೆ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿಸಿದರೆ ಬೆಳೆ ರಕ್ಷಿಸುಕೊಳ್ಳುವ ಮೊರೆಯನ್ನು ರೈತರು ಇಟ್ಟಿದ್ದಾರೆ.

ತಾಲೂಕಿನಲ್ಲಿ ಕಳೆದ ಬಾರಿ ನೀರಿನ ಕೊರತೆಯಿಂದ ಬೇಸಿಗೆ ಬೆಳೆಯ ಭತ್ತವನ್ನು ಬೆಳೆದುಕೊಂಡಿರಲಿಲ್ಲ. ಈ ಬಾರಿ ಉತ್ತಮ ಮಳೆ ಆಗಿದ್ದರಿಂದ ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿತ್ತು. ಮುಂಗಾರು ಹಂಗಾಮು ಭತ್ತದ ಬೆಳೆ ತೆಗೆದುಕೊಂಡಾಗ ಕೂಡ ಹೆಚ್ಚಿನ ಪ್ರಮಾಣದ ನೀರು ಜಲಾಶಯದಲ್ಲಿ ಸಂಗ್ರಹವಿದ್ದರಿಂದ ತಾಲೂಕಿನಲ್ಲಿ ಅಂದಾಜು 65 ಸಾವಿರ ಹೆಕ್ಟೇರ್ ಪ್ರದೇಶದ ಪೂರ್ಣ ಪ್ರಮಾಣದಲ್ಲಿ ಭತ್ತ ನಾಟಿ ಮಾಡಿದ್ದರ ಪರಿಣಾಮ ಈ ಬಾರಿ ತಾಲೂಕಿನಲ್ಲಿ ನೀರಿನ ಕೊರತೆ ಹೆಚ್ಚಾಗಿದೆ.

ಒಣ ಪ್ರದೇಶದಲ್ಲಿಯೂ ತಡವಾಗಿ ಭತ್ತ ನಾಟಿ ಮಾಡಿದ್ದು ಈ ಬೆಳೆ ಉಳಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳು ನಡೆದಿವೆ. ಶೇ.30 ಪ್ರಮಾಣದ ಭತ್ತವು ಕಳೆದ ಹದಿನೈದು ದಿನಗಳಿಂದ ಕಾಳುಕಟ್ಟಿದ್ದು ಇನ್ನೂ ಕಟಾವಿಗೆ 20 ದಿನ ಮೇಲೆ ಬೇಕು. ಆದರೆ, ತುಂಗಭದ್ರಾ ಎಡದಂಡೆ ನಾಲೆಯ ಪಕ್ಕದ ಜಮೀನುಗಳಲ್ಲಿ ಈಗ ಶೇ.65 ಕಟಾವಿಗೆ ಬಂದಿದ್ದು ನೀರಿನ ಅವಶ್ಯಕತೆಯೂ ಇಲ್ಲ. ಈಗಾಗಲೇ ಎಲ್ಲಿ ಭತ್ತ ಕಟಾವಿಗೆ ಬಂದಿದೆ. ಯಾವ ಕಾಲುವೆ ವ್ಯಾಪ್ತಿ ಎನ್ನುವುದು ನೀರಾವರಿ ಅಧಿಕಾರಿಗಳಿಗೆ ಗೊತ್ತಿದೆ. ಇದನ್ನು ಪತ್ತೆ ಹಚ್ಚಿ ನೀರನ್ನು ಕೊನೆ ಭಾಗದ ರೈತರಿಗೆ ಮುಟ್ಟಿಸುವ ಕೆಲಸ ನಡೆಯಬೇಕು.

ಬೆಳೆ ನಷ್ಟ ಸಂಭವ: ಈ ಹಿಂದೆ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರಿನ ಲಭ್ಯತೆ ಅರಿತು ಹೆಚ್ಚಿನ ಪ್ರಮಾಣದಲ್ಲಿ ಭತ್ತ ನಾಟಿಯಾಗಿದೆ. ಶೇ.70 ಪ್ರಮಾಣದಲ್ಲಿ ಭತ್ತ ಕಟಾವಿಗೆ ಬಂದಿದ್ದು ಇನ್ನು ಶೇ.30 ಭತ್ತಕ್ಕೆ ಏ.15ರ ವರೆಗೆ ನೀರು ಬೇಕು. ಆದರೆ, ಈಗಾಗಲೇ ಐಸಿಸಿ ಸಭೆ ನಿರ್ಧಾರದಂತೆ ಏ.5ವರೆಗೆ ಬೆಳೆಗೆ ಹಾಗೂ ಇನ್ನೂ ಐದು ದಿನ ಕುಡಿವ ನೀರಿಗೆ ಎಂದು ಹೇಳಲಾಗಿದೆ. ಇದರಂತೆ ನೀರು ಹರಿಸಿದರೆ ಶೇ.20 ಭಾಗದ ಭತ್ತ ನೀರಿಲ್ಲದೆ ಒಣಗಿ ರೈತರು ನಷ್ಟ ಅನುಭವಿಸಲಿದ್ದಾರೆ.

ನೀರಾವರಿ ಇಲಾಖೆ ಹೆಚ್ಚಿನ ಕಾಳಜಿ ವಹಿಸಿ, ಕಾಲುವೆ ಹರಿವಿನಲ್ಲಿ ನೀರನ್ನು ಕಡಿತ ಮಾಡಿ, ಕೆಳ ಭಾಗದ ಭತ್ತದ ಜಮೀನುಗಳಿಗೆ ಸಮರ್ಪಕ ನೀರು ತುಂಬಿಸಿಕೊಳ್ಳುವಂತ ವ್ಯವಸ್ಥೆ ಮಾಡಬೇಕು. ಐದು ದಿನಗಳವರೆಗೆ ಸಂಪೂರ್ಣ ಪ್ರಮಾಣದ ನೀರು ಕೊನೆಯ ಭಾಗಕ್ಕೆ ಹರಿಯುವಂತೆ ನೋಡಿಕೊಳ್ಳುವ ಅಗತ್ಯತೆ ಇದೆ. ರೈತರು ಈ ಕಾರ್ಯಕ್ಕೆ ಸಹಕಾರ ನೀಡಬೇಕಿದೆ ಎಂಬುದು ರೈತ ಮುಖಂಡರ ಮನವಿಯಾಗಿದೆ.

ತಾಲೂಕಿನಲ್ಲಿ ಶೇ.60 ಕ್ಕಿಂತ ಹೆಚ್ಚು ಭಾಗದ ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಭತ್ತದ ಬೆಳೆ ಕಟಾವಿಗೆ ಬಂದಿದ್ದು ಅವರಿಗೆ ನೀರಿನ ಅಗತ್ಯ ಇಲ್ಲ. ಈ ನೀರು ಕೆಳ ಭಾಗಕ್ಕೆ ತಲುಪಿಸುವ ವ್ಯವಸ್ಥೆ ಮಾಡುವೆವು. ರೈತರು ಸಂಪೂರ್ಣ ಸಹಕಾರ ನೀಡಬೇಕು. ಕೆಳ ಭಾಗದ ಬೆಳೆ ಉಳಿಸಬೇಕು. ಐದು ದಿನ ಮಾತ್ರ ಬೆಳೆಗೆ ನೀರು ಹರಿದು ಬರಲಿದೆ. ಸತ್ಯನಾರಾಯಣಶ್ರೇಷ್ಠಿ ಇಇ, ನೀರಾವರಿ ಇಲಾಖೆ, ಸಿಂಧನೂರು.

ತಾಲೂಕಿನ ಕೊನೆ ಭಾಗದ ರೈತರ ಹಿತ ಕಾಯುವ ನಿಟ್ಟಿನಲ್ಲಿ ಏ.15ರ ವರೆಗೆ ಎಡದಂಡೆ ನಾಲೆಗೆ ನೀರು ಹರಿಸಬೇಕು. ಮುಂಗಾರು ಬೆಳೆ ಪಡೆದ ನಂತರ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣ ನೀರು ಇತ್ತು. ಆದರೆ, ಅಲ್ಲಿಂದ ಇಲ್ಲಿಯವರೆಗೆ ಯಾವ ಲೆಕ್ಕಾಚಾರದಲ್ಲಿ ನೀರು ಹರಿಸಿ ಜಲಾಶಯ ಖಾಲಿ ಮಾಡಿದ್ದಾರೆನ್ನುವುದು ಅಧಿಕಾರಿಗಳು ಹೇಳಬೇಕು. ಮೇಲ್ಭಾಗದಲ್ಲಿ ಭತ್ತ ಕಟಾವಿಗೆ ಬಂದಿರುವುದರಿಂದ ಕೆಳ ಭಾಗಕ್ಕೆ ಸಮರ್ಪಕ ನೀರು ತಲುಪಿಸುವ ವ್ಯವಸ್ಥೆ ನೀರಾವರಿ ಅಧಿಕಾರಿಗಳು ಮಾಡಬೇಕು.

ಶರಣಪ್ಪ ಮರಳಿ

ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಯಚೂರು.