ಶಿವಾನಂದ ಹಿರೇಮಠ, ಗದಗ
ನಗರದ ಹೊರವಲಯದ ನರಸಾಪುರ ಗ್ರಾಮ ವ್ಯಾಪ್ತಿಯಲ್ಲಿ ಎರಡನೇ ಹಂತದ ಕೈಗಾರಿಕಾ ವಲಯ ನಿರ್ಮಾಣಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿದೆ.
ಕಳೆದ 13 ವರ್ಷಗಳಿಂದಲೂ ತ್ರಿಶಂಕು ಸ್ಥಿತಿಯಲ್ಲಿದ್ದ ಈ ಪ್ರಕ್ರಿಯೆಗೆ ಕೊನೆಗೂ ಶುಕ್ರದೆಸೆ ಕೂಡಿ ಬಂದಿದ್ದು, ಇಲಾಖೆಯಿಂದ ಅಂತಿಮ ಸ್ವರೂಪ ನೀಡಲಾಗುತ್ತಿದೆ. ಭೂಸ್ವಾಧೀನಕ್ಕಾಗಿ ದರ ನಿಗದಿ ಬಾಕಿ ಇದ್ದು, ಕೈಗಾರಿಗಾ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ವಿಶೇಷ ಅಧಿಕಾರಿ ನೇತೃತ್ವದದಲ್ಲಿ ರೈತರೊಂದಿಗೆ ಸಭೆ ಜರುಗಬೇಕಿದೆ.
2010ರಲ್ಲಿ ಈ ಯೋಜನೆಯ ಪ್ರಸ್ತಾವನೆಯು ಕೆಐಎಡಿಬಿ ಮೆಟ್ಟಿಲೇರಿತ್ತು. ಅಂದಿನಿಂದ ಸರ್ವೇ, ಸುತ್ತೋಲೆ ಹಂತದಲ್ಲೇ ಯೋಜನೆ ವಿಳಂಬವಾಗಿತ್ತು. ಯೋಜನೆಯೂ ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳ್ಳುವ ನಿರೀಕ್ಷೆ ಹುಸಿಯಾಗಿ, ಕೈಗಾರಿಕಾ ಇಲಾಖೆಯ ವಿಳಂಬ ಧೋರಣೆಯಿಂದ ಗದಗ ನಗರದಲ್ಲಿ ಕೈಗಾರಿಕೆ ಸ್ಥಾಪನೆಗೂ ಪೂರಕ ವಾತಾವರಣ ಇಲ್ಲದಂತಾಗಿ ನವೋದ್ಯಮಿಗಳ ನಿರೀಕ್ಷೆ ಹುಸಿಯಾಗಿತ್ತು. ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರತಿ ಎಕರೆಗೆ ದರ ನಿಗದಿ ಮಾಡುವ ಜವಾಬ್ದಾರಿ ಈಗ ಅಧಿಕಾರಿಗಳ ಮೇಲಿದೆ.
ಕೈಗಾರಿಕಾ ಉದ್ದೇಶಕ್ಕೆ 216.5 ಎಕರೆ ಭೂಸ್ವಾಧೀನ ಪಡಿಸಿಕೊಳ್ಳುವ ಯೋಜನೆ ಇದಾಗಿದೆ. ಗದಗ ಜಿಲ್ಲೆ ರಚನೆಯಾಗಿ 25 ವರ್ಷ ಕಳೆದರೂ ಭೂಮಿ, ಪರಿಸರವಾದಿಗಳ ವಿರೋಧ, ಉತ್ತಮ ಸೌಲಭ್ಯಗಳಿರದ ಹಿನ್ನೆಲೆ ಜಿಲ್ಲೆಯಲ್ಲಿ ಬೃಹತ್ ಉದ್ಯಮ ಸ್ಥಾಪಿಸಲು ಉದ್ಯಮಿಗಳು ಮುಂದೆ ಬರುತ್ತಿಲ್ಲ. ಉದ್ಯಮಿಗಳಿಗೆ ಸೂಕ್ತ ಭೂಮಿ ಒದಗಿಸಿಲು ಕೈಗಾರಿಕೆ ಸ್ಥಾಪಿಸುವ ಉದ್ದೇಶದೊಂದಿಗೆ ಗದಗ ನಗರದಿಂದ ರೋಣ ಮುಖ್ಯರಸ್ತೆಗೆ ಹೊಂದಿಕೊಂಡಿರುವ ನರಸಾಪುರ ಗ್ರಾಮ ವ್ಯಾಪ್ತಿಯಲ್ಲಿನ 216.5 ಎಕರೆ ಭೂ ಪ್ರದೇಶವನ್ನು ರೈತರಿಂದ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ 2010ರಲ್ಲೇ ಚಾಲನೆ ನೀಡಲಾಗಿತ್ತು.
ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡುವ 216.5 ಎಕರೆ ಭೂಮಿಯಲ್ಲಿ ಎರಡು ಸರ್ವೇ ನಂಬರ್‌ನ 7 ಎಕರೆ ಜಮೀನು 2009ರಲ್ಲೇ ಕೃಷಿಯೇತರ ಜಮೀನು(ಎನ್‌ಎ ಲ್ಯಾಂಡ್) ಎಂದು ಬದಲಾಗಿತ್ತು. ಎನ್‌ಎ ಭೂಮಿಗೆ ಇತರ ಕೃಷಿ ಭೂಮಿಗಿಂತಲೂ ಹೆಚ್ಚು ಪರಿಹಾರ ಒದಗಿಸಬೇಕಿದೆ. ಹೀಗಾಗಿ ತಾಂತ್ರಿಕ ತೊಡಕು ಎದುರಾಗಿತ್ತು. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಈ ಸಮಸ್ಯೆ ಬಗೆಹರಿಯುವುದು ಜಟಿಲವಾಗಿತ್ತು. ಭೂ ಮಾಲೀಕರ ಜತೆ ಮಾತುಕತೆ ನಡೆಸುವ ಮೂಲಕ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದಾರೆ.
ಇದಕ್ಕೂ ಮೊದಲು ಆರಂಭದಲ್ಲಿ 800 ಎಕರೆ, ತದನಂತರ 600 ಎಕರೆ ಸ್ವಾಧೀನಕ್ಕೆ ಹಸಿರು ನಿಶಾನೆ ತೋರಿದ್ದ ಕೈಗಾರಿಕೆ ಇಲಾಖೆ ಅಂತಿಮವಾಗಿ 216.5 ಎಕರೆ ಸ್ವಾಧೀನ ಪಡಿಸಿಕೊಳ್ಳಲು ತೀರ್ಮಾನಿಸಿತು. ಪ್ರಸ್ತುತ ಯೋಜನೆಯಲ್ಲಿ ಯೋಜನೆಯಲ್ಲಿ 360 ಭೂ ಮಾಲೀಕರು ಕೃಷಿ ಭೂಮಿ ಕಳೆದುಕೊಳ್ಳಲಿದ್ದಾರೆ.
ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿದ್ದಂತೆ ಕೈಗಾರಿಕಾ ನಿವೇಶನ ಮಂಜೂರು ಮಾಡುವಂತೆ ದಲ್ಲಾಳಿಗಳು ಇಲಾಖೆಗೆ ಮುಗಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿದೆ. ಇನ್ನೂ ನಿವೇಶನ ಅಭಿವೃದ್ಧಿಗೊಳಿಸುವ ಪ್ರಕ್ರಿಯೆ ಬಾಕಿ ಇದ್ದರೂ ಮಧ್ಯವರ್ತಿಗಳು ನವೋದ್ಯಮಿಗಳಿಂದ ಲಂಚ ಪಡೆದು ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳಿಗೂ ಮಾಹಿತಿ ಇದೆ ಎನ್ನಲಾಗಿದೆ.
ಭೂ ಸ್ವಾಧೀನ ಪ್ರಕ್ರಿಯೆಗೆ ಸ್ವಾಗತ. ಆದರೆ, ಕೆಐಎಡಿಬಿಯಲ್ಲಿ ಭೂ ಮೌಲ್ಯ 75 ಲಕ್ಷ ರೂ. ಪಾವತಿಸಬೇಕು. ಮಧ್ಯಮ ವರ್ಗದ ನವೋದ್ಯಮಿಗಳು ಭೂ ಖರೀದಿ ಅಸಾಧ್ಯವಾಗಿದೆ. ಈ ಬಗ್ಗೆಯೂ ಸರ್ಕಾರ ಗಮನಹರಿಸಲಿ ಶಿವಕುಮಾರ ಪಾಟೀಲ, ನರಸಾಪುರ ಕೈಗಾರಿಕಾ ಪ್ರದೇಶ, ಕೆಐಎಡಿಬಿ ಅಧ್ಯಕ್ಷ ಆದಷ್ಟು ಬೇಗ ದರ ನಿಗದಿಗೊಳಿಸಲು ಕೆಐಎಡಿಬಿ ವಿಶೇಷ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ರೈತರೊಂದಿಗೆ ಸಭೆ ಜರುಗಿಸಿ ಅಂತಿಮ ರೂಪುರೇಷೆ ಕೊಡಲಾಗುವುದು. ಶಿವಪುತ್ರಪ್ಪ , ಜಿಲ್ಲಾ ಕೈಗಾರಿಕಾ ಅಧಿಕಾರಿ