ಜಿಲ್ಲೆ

ಹಾಸನ- ಮಂಗಳೂರು ಹಳಿ ದ್ವಿಗುಣ ಸ್ಥಳ ಸಮೀಕ್ಷೆ ವರದಿ ಸಲ್ಲಿಕೆಗೆ ಗಡುವು

ವಿಜಯವಾಣಿ ಸುದ್ದಿಜಾಲ ಮಂಗಳೂರು

ಹಾಸನ ಮತ್ತು ಮಂಗಳೂರು ನಡುವಿನ 247 ಕಿ.ಮೀ ರೈಲು ಹಳಿ ದ್ವಿಗುಣ ಕಾಮಗಾರಿ ಅಂತಿಮ ಸ್ಥಳ ಸಮೀಕ್ಷೆ ಕಾಮಗಾರಿಗೆ ಭಾರತೀಯ ರೈಲ್ವೆ ಮಂಡಳಿಯು ಅನುಮೋದನೆ ನೀಡಿದ್ದು, ವರದಿ ಸಲ್ಲಿಸಲು 2026, ಏಪ್ರಿಲ್ ಗಡುವು ನಿಗದಿಪಡಿಸಲಾಗಿದೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸುವ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ರೈಲ್ವೆ ಮೈಸೂರು ವಿಭಾಗದ ಹಿರಿಯ ಅಧಿಕಾರಿ ಈ ಮಾಹಿತಿ ನೀಡಿದರು.

ಅಂತಿಮ ಸ್ಥಳ ಸಮೀಕ್ಷೆಯು ಪರಿಸರ ಪರಿಣಾಮ ಮೌಲ್ಯಮಾಪನ ಮತ್ತು ಸಾಮಾಜಿಕ ಪರಿಣಾಮ ಮೌಲ್ಯಮಾಪನ ಸಹಿತ ವಿವರವಾದ ಯೋಜನಾ ವರದಿಯನ್ನು ಒಳಗೊಂಡಿರುತ್ತದೆ. ಪ್ರಸ್ತಾವಿತ ಮಾರ್ಗವು ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 127 ಘಾಟ್ ಪ್ರದೇಶವನ್ನು ಒಳಗೊಂಡಿದೆ. 61 ಮುಖ್ಯ ಸೇತುವೆ, 481 ಕಿರು ಸೇತುವೆ, 36 ಮೇಲ್ಸೇತುವೆ, 50 ಕೆಳಸೇತುವೆ, 29 ಲೆವೆಲ್ ಕ್ರಾಸಿಂಗ್, 28 ಸುರಂಗಗಳನ್ನು ಒಳಗೊಂಡಿದೆ. ಮೈಸೂರು ವಿಭಾಗದಿಂದ ಅಸ್ತಿತ್ವದಲ್ಲಿರುವ ದತ್ತಾಂಶ ಸಂಗ್ರಹ ಪೂರ್ಣಗೊಂಡಿದ್ದು, ಪ್ರಾಥಮಿಕ ಡೆಸ್ಕ್‌ಟಾಪ್ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಕೆತ್ತಿಕಲ್‌ನಲ್ಲಿ ನಿರ್ಮಾಣವಾದ ತಡೆಗೋಡೆ ಅವೈಜ್ಞಾನಿಕವಾಗಿದೆ. ಹಲವು ಕಡೆಗಳಲ್ಲಿ ಮೋರಿಗಳನ್ನು ನಿರ್ಮಿಸಿದ ಪರಿಣಾಮ ಕೆಳಗಿನ ಗದ್ದೆಗಳಿಗೆ ನೀರು ನುಗ್ಗುತ್ತಿದೆ. ಈ ಬಾರಿ ಹೆಚ್ಚು ಭೂಕುಸಿತವಾಗಿದೆ ಎಂದು ನಾಮನಿರ್ದೇಶಿತ ಸದಸ್ಯ ರಾಜೀವ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.

ಕೆತ್ತಿಕಲ್‌ನ ಸಮಸ್ಯೆ ಕುರಿತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ (ಎನ್‌ಐಆರ್‌ಎಂ)ನ ತಜ್ಞರು ಪರಿಶೀಲನೆ ನಡೆಸಿದ್ದು, ಅವರ ಸೂಚನೆಯಂತೆ ಎನ್‌ಎಚ್‌ಎಐ ಇಳಿಜಾರು ಸ್ಥಿರೀಕರಣ ಮತ್ತು ರಕ್ಷಣಾ ಕಾರ್ಯ ಆರಂಭಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಭೆಗೆ ತಿಳಿಸಿದರು.

ಪುಣೆಯಿಂದ ಶೀಘ್ರವೇ ಮಿಲಿಟರಿ ಟ್ಯಾಂಕರ್ ಒಂದು ಮಂಗಳೂರಿಗೆ ಬರಲಿದ್ದು, ಇಲ್ಲಿ ಅದರ ಪ್ರದರ್ಶನ ನಡೆಯಲಿದೆ. ಸರ್ಕ್ಯೂಟ್ ಹೌಸ್ ಬಳಿಯ ಯೋಧರ ಸ್ಮಾರಕದ ಬಳಿ ಇದನ್ನು ಪ್ರದರ್ಶನಕ್ಕೆ ಇರಿಸಲು ಉದ್ದೇಶಿಸಲಾಗಿದೆ. ಪುಣೆಯಿಂದ ಇಲ್ಲಿಗೆ ತರಿಸಲು ಸುಮಾರು 1.5 ಲಕ್ಷ ರೂ. ವೆಚ್ಚವಾಗಲಿದೆ ಎಂದು ಸಂಸದರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಜಿಪಂ ಸಿಇಒ ಡಾ.ಆನಂದ್, ಎಸ್ಪಿ ಡಾ. ಅರುಣ್, ಅರಣ್ಯ ಉಪಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ನಾಮನಿರ್ದೇಶಿತ ಸದಸ್ಯರಾದ ಪೂರ್ಣಿಮಾ, ದಯಾನಂದ ಚೇಳ್ಯಾರು, ಅಮೃತ್‌ಲಾಲ್ ಜಾಯ್ಸ ಡಿಸೋಜಾ, ಭರತ್ ಕುಮಾರ್, ಸಂತೋಷ್ ಕುಮಾರ್ ರಾಯಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.