ಮೈಸೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಮಂಗಳವಾರ ಪ್ರಕಟವಾಗಿದ್ದು, 11,15,225 ಪುರುಷರು, 11,64,702 ಮಹಿಳೆಯರು ಹಾಗೂ 140 ತೃತೀಯ ಲಿಂಗಿಗಳು ಸೇರಿದಂತೆ 22,80,067 ಮತದಾರರು ಇದ್ದಾರೆ.
ಎಸ್ಐಆರ್ ಪ್ರಾರಂಭಕ್ಕೂ ಮುನ್ನ ಜಿಲ್ಲೆಯಲ್ಲಿ 27,99,693 ಮತದಾರರು ಇದ್ದರು. ಎಸ್ಐಆರ್ ನಂತರ ಆಗಸ್ಟ್ 24ರಂದು ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿಯಲ್ಲಿ 22,42,452 ಮತದಾರರಿದ್ದರು. ಆ ಬಳಿಕ ನಡೆದ ಸೇರ್ಪಡೆ ಮತ್ತು ತೆಗೆದು ಹಾಕುವಿಕೆ ಪ್ರಕ್ರಿಯೆಯಲ್ಲಿ 44,648 ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದ್ದು, 7,033 ಹೆಸರುಗಳನ್ನು ತೆಗೆದು ಹಾಕಲಾಗಿದೆ. ಇದರಿಂದ ಅಂತಿಮ ಪಟ್ಟಿಯಲ್ಲಿ ಕರಡು ಪಟ್ಟಿಗಿಂತ 37,615 ಮತದಾರರು ಹೆಚ್ಚಾಗಿದ್ದಾರೆ.
ಮಹಿಳಾ ಮತದಾರರೇ ಹೆಚ್ಚು:
ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಪುರುಷರು 11,15,225 ಇದ್ದರೆ, ಮಹಿಳೆಯರು 11,64,702 ಇದ್ದು, ಪುರುಷರಿಗಿಂತ 49,477 ಮಹಿಳಾ ಮತದಾರರು ಹೆಚ್ಚಿದ್ದಾರೆ. ತೃತೀಯ ಲಿಂಗದ ಮತದಾರರ ಸಂಖ್ಯೆ 140 ಇದೆ.
31,313 ಯುವ ಮತದಾರರು:
ಜಿಲ್ಲೆಯಲ್ಲಿ 18, 19 ವರ್ಷದ ಒಟ್ಟು 31,313 ಹೊಸ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿ ದ್ದಾರೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ 2412, ಕೃಷ್ಣರಾಜನಗರದಲ್ಲಿ 2784, ಹುಣಸೂರಿನಲ್ಲಿ 3895, ಎಚ್.ಡಿ. ಕೋಟೆಯಲ್ಲಿ 2671, ನಂಜನಗೂಡಿನಲ್ಲಿ 1862, ಚಾಮುಂಡೇಶ್ವರಿಯಲ್ಲಿ 4151, ಕೃಷ್ಣರಾಜದಲ್ಲಿ 1772, ಚಾಮರಾಜದಲ್ಲಿ 2073, ನರಸಿಂಹರಾಜದಲ್ಲಿ 4419, ವರುಣದಲ್ಲಿ 3037, ತಿ.ನರಸೀಪುರದಲ್ಲಿ 2237 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಪ್ರಕಟವಾದ ಕರಡು ಮತದಾರರ ಪಟ್ಟಿ ಹಾಗೂ ಪ್ರಸ್ತುತ ಪ್ರಕಟವಾಗಿರುವ ಅಂತಿಮ ಮತದಾರರ ಪಟ್ಟಿಗೆ ಹೋಲಿಕೆ ಮಾಡಿದರೆ ಪಿರಿಯಾಪಟ್ಟಣ ಕ್ಷೇತ್ರದಲ್ಲಿ 1794, ಕೃಷ್ಣರಾಜನಗರದಲ್ಲಿ 2190, ಹುಣಸೂರಿನಲ್ಲಿ 3,304, ಎಚ್.ಡಿ. ಕೋಟೆಯಲ್ಲಿ 2537, ನಂಜನಗೂಡಿನಲ್ಲಿ 1726, ಚಾಮುಂಡೇಶ್ವರಿಯಲ್ಲಿ 7375, ಕೃಷ್ಣರಾಜದಲ್ಲಿ 4213, ಚಾಮರಾಜದಲ್ಲಿ 3638, ನರಸಿಂಹರಾಜದಲ್ಲಿ 7482, ವರುಣದಲ್ಲಿ 1772, ತಿ.ನರಸೀಪುರದಲ್ಲಿ 1584 ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 37,615 ಮತದಾರರ ಸಂಖ್ಯೆ ಹೆಚ್ಚಾಗಿದೆ.
5,19,626 ಮತದಾರರು ಡಿಲೀಟ್..!
ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಾರಂಭವಾಗುವ ಮುನ್ನ ಜಿಲ್ಲೆಯಲ್ಲಿ 27,99,693 ಮತದಾರರು ಇದ್ದರು. ಎಸ್ಐಆರ್ ನಂತರ ಆಗಸ್ಟ್ ತಿಂಗಳಿನಲ್ಲಿ ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ 22,42,452 ಮತದಾರರು ಸ್ಥಾನ ಪಡೆದುಕೊಂ ಡರು. ನಂತರ ಮತದಾರರ ಹೆಸರು, ತಂದೆ, ತಾಯಿಯ ಹೆಸರು, ವಯಸ್ಸಿನ ಗೊಂದಲ ಸೇರಿದಂತೆ ವಿವಿಧ ಗೊಂದಲವನ್ನು ಪರಿಹರಿಸಿಕೊಂಡ ನಂತರ 7033 ಮತದಾರರ ಹೆಸರನ್ನು ಕೈಬಿಡಲಾಯಿತು. ಅಲ್ಲದೆ, 44,648 ಮತದಾರರ ಹೆಸರನ್ನು ಸೇರ್ಪಡೆಗೊಳಿ ಸಲಾಯಿತು. ಅಂತಿಮವಾಗಿ 22,80,067 ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಹಳೆಯ ಮತದಾರರ ಪಟ್ಟಿಗೆ ಹೋಲಿಸಿದರೆ 5,19,626 ಮತದಾರರ ಹೆಸರು ಡಿಲೀಡ್ ಆಗಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟವಾದರೂ ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ಪ್ರಕ್ರಿಯೆ ಮುಂದುವರಿಯಲಿದೆ. ಅರ್ಹ ಮತದಾರರು ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಅಳಿಸುವಿಕೆಗೆ ಸಂಬಂಧಿಸಿದಂತೆ ನಿಗದಿತ ಅರ್ಜಿಗಳನ್ನು ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್ಸೈಟ್ ಹಾಗೂ ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ಪರಿಶಿಲಿಸಬಹುದು.
ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ