ಪುತ್ತೂರು: ವಿಮರ್ಶಾತ್ಮಕ ಚಿಂತನೆ, ಜೀವನ ಪರ್ಯಂತ ಕಲಿಕೆ, ಸಂವಹನ ಹಾಗೂ ಆವಿಷ್ಕಾರಕ್ಕೆ ಕಾರಣವಾಗುವ ಶಿಕ್ಷಣದ ಅಗತ್ಯವಿದೆ. ಯುವ ಸಮುದಾಯಕ್ಕೆ ಅಗತ್ಯವಿರುವ ವಿಚಾರಗಳನ್ನು ಕಲಿಕೆಯಲ್ಲಿ ಜೋಡಿಸಿಕೊಳ್ಳಬೇಕಾಗಿದೆ ಎಂದು ಬೆಂಗಳೂರು ಮಹಾನಗರ ಮೆಟ್ರೊಪೊಲಿಟನ್ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಹೇಳಿದರು.
ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಅಽನಕ್ಕೊಳಪಟ್ಟ ಪುತ್ತೂರು ಸಂತ ಫಿಲೋಮಿನಾ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದ ಅಽನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟ ಹಿನ್ನೆಲೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸ್ವಾಯತ್ತ ಸ್ಥಾನಮಾನವನ್ನು ಉದ್ಘಾಟಿಸಿ ಮಾತನಾಡಿದರು.
ನೂತನ ಸೌಲಭ್ಯಗಳನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ ಮಾತನಾಡಿ, ಉದ್ಯೋಗ ಕ್ಷೇತ್ರದ ಬೇಡಿಕೆಗಳಿಗೆ ಅನುಗುಣವಾದ ಪಠ್ಯಕ್ರಮವನ್ನು ರಚಿಸುವುದು ಮಾತ್ರ ಸ್ವಾಯತ್ತ ಸಂಸ್ಥೆಯ ಜವಾಬ್ದಾರಿಯಲ್ಲ. ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಟಿಸಿ ಉತ್ತಮ ನಾಗರಿಕರನ್ನಾಗಿಸುವ ಪಠ್ಯಕ್ರಮ ರಚಿಸುವ ಜವಾಬ್ದಾರಿ ಸ್ವಾಯತ್ತ ಸಂಸ್ಥೆಗಿದೆ ಎಂದರು.
ಸ್ವಾಯತ್ತ ಕಾಲೇಜಿನ ಲಾಂಛನ ಹಾಗೂ ಪರಿಷ್ಕರಿಸಲಾದ ಕಾಲೇಜು ವೆಬ್‌ಸೈಟ್ ಲೋಕಾರ್ಪಣೆಯನ್ನು ಮಾಜಿ ಸಂಸದ ನಡೆಸಿದರು. ಸ್ಮರಣ ಸಂಚಿಕೆ ಫಿಲೋ ಜೆನೆಸಿಸ್‌ನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬಿಡುಗಡೆಗೊಳಿಸಿದರು. ದಕ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದರು.
ಸ್ವಾಯತ್ತ ಕಾಲೇಜಿಗೆ ರಿಜಿಸ್ಟ್ರಾರ್ (ಅಕಾಡೆಮಿಕ್) ಆಗಿ ನೇಮಕಗೊಂಡ ಡಾ.ನಾರ್ಬರ್ಟ್ ಮಸ್ಕರೇನಸ್, ಪರೀಕ್ಷಾಂಗ ಕುಲಸಚಿವ ಡಾ.ವಿನಯಚಂದ್ರ, ಹಣಕಾಸು ಅಽಕಾರಿ ಡಾ. ಎಡ್ವಿನ್ ಎಸ್ ಡಿಸೋಜ, ಶೈಕ್ಷಣಿಕ ಉಪಕುಲಸಚಿವ ವಿಪಿನ್ ನಾಯಕ್ ಎನ್.ಎಸ್. ಪರೀಕ್ಷಾಂಗ ಉಪಕುಲಸಚಿವರಾದ ಜೋನ್ಸನ್ ಡೇವಿಡ್ ಸಿಕ್ವೇರಾ, ಅಭಿಷೇಕ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಕವಿತಾ ಕೆ.ಆರ್., ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಡಾ.ಪ್ರವೀಣ್ ಲಿಯೊ ಲಸ್ರಾದೊ, ನಿಕಟಪೂರ್ವ ಕಾರ್ಯದರ್ಶಿ ಆಂಟನಿ ಮೈಕೆಲ್ ಶೆರಾ, ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ಮ್ಯಾಕ್ಸಿಮ್ ನೊರೊನ್ಹಾ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಮಾ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎ.ಎಂ.ಅಬ್ದುಲ್ ಕುಂಞ್ಞಿ ಉಪಸ್ಥಿತರಿದ್ದರು.
ಕಾಲೇಜಿನ ಸಂಚಾಲಕ ಲಾರೆನ್ಸ್ ಮಸ್ಕರೇನಸ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾಲೇಜು ಪ್ರಾಂಶುಪಾಲ ಡಾ.ಆಂಟನಿ ಪ್ರಕಾಶ್ ಮೊಂತೇರೊ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭಾರತಿ ಎಸ್.ರೈ ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯೆಯ ಜತೆಗೆ ವಿನಯವೂ ಅಗತ್ಯವಾಗಿದ್ದು, ಮಾನವೀಯ ಮೌಲಗಳನ್ನು ಮರೆಯಬಾರದು. ಎಲ್ಲ ರೀತಿಯ ಜನರನ್ನೂ ಪ್ರೀತಿಸುವ ಹೃದಯ ವೈಶಾಲ್ಯವಿರಬೇಕು. ಸ್ವಾಯತ್ತ ಸಂಸ್ಥೆಯಲ್ಲಿ ಪ್ರತಿಯೋರ್ವನೂ ಜವಾಬ್ದಾರಿಯನ್ನರಿತು ಕರ್ತವ್ಯ ನಿರ್ವಹಿಸಬೇಕು.
| ಡಾ. ಪೀಟರ್ ಪಾವ್ಲ್ ಸಲ್ದಾನ
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್
ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ವಿದ್ಯಾಸಂಸ್ಥೆಗಳು ನೀಡಿದ ಕೊಡುಗೆ ಅಪಾರ. ಕುಗ್ರಾಮಗಳಲ್ಲಿ ಓದಿದವರೇ ದೇಶದ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ನೀಡಲಾಗುತ್ತಿದೆಯಾದರೂ, ಅಗತ್ಯ ಸೌಕರ್ಯ ನೀಡದೆ ಇರುವುದರಲ್ಲಿ ಸುಧಾರಿಸಿ ಎನ್ನುವ ದುಸ್ಥಿತಿ ಎದುರಾಗಿದೆ.
| ಐವನ್ ಡಿಸೋಜ ವಿಧಾನ ಪರಿಷತ್ ಸದಸ್ಯ
ಶೈಕ್ಷಣಿಕ ಶ್ರೇಷ್ಠತೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸಾಧನೆಗಳ ಸಂಕೇತವಾದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರಕಿರುವುದು ಸಂತಸದ ಸಂಗತಿಯಾಗಿದೆ. ಹಲವು ದಶಕಗಳಿಂದ ಸಾವಿರಾರು ಯುವ ಮನಸ್ಸುಗಳಲ್ಲಿ ಜ್ಞಾನದ ಬೀಜವನ್ನು ಸಂಸ್ಥೆ ಬಿತ್ತುತ್ತಿದೆ.
| ಕ್ಯಾ. ಬ್ರಿಜೇಶ್ ಚೌಟ ದಕ ಸಂಸದ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜತೆಗೆ ಉದ್ಯೋಗಾವಕಾಶ ನೀಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿದ ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೇರಬೇಕು.
| ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು