ಜಿಲ್ಲೆ

ಫಿಲೋಮಿನಾದಲ್ಲಿ ಮಾತೃಭಾಷಾ ದಿನ

Mangaluru - Nishantha Narayana

ಪುತ್ತೂರು : ವಿಶ್ವ ಮಾತೃಭಾಷಾ ದಿನದ ಆಚರಣೆಯ ಅಂಗವಾಗಿ ಮಾತೃಭಾಷೆಯ ಮೂಲಕ ಪ್ರತಿಭೆ ಮತ್ತು ಸಾಮರ್ಥ್ಯಗಳ ಸಮಗ್ರ ಅಭಿವೃದ್ಧಿ ಎಂಬ ಧ್ಯೇಯದ ಹಿನ್ನೆಲೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಮಾತೃಭಾಷಾ ದಿನ ನಡೆಯಿತು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ನಾಡುನುಡಿಯನ್ನು ಪ್ರೀತಿಸಬೇಕು. ಭಾಷೆ ನಮಗೇನು ಕೊಟ್ಟಿದೆ ಎಂದು ಯೋಚಿಸುವ ಬದಲು ನಾವು ಭಾಷೆಗೇನು ಕೊಟ್ಟಿದ್ದೇವೆ ಎಂಬುದನ್ನು ಆಲೋಚಿಸಬೇಕಿದೆ ಎಂದು ಹೇಳಿದರು.

ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಮೈತ್ರಿ ಭಟ್ ಮಾತನಾಡಿ, ಭಾಷೆ ಮತ್ತು ಬದುಕು ಬೇರೆ ಅಲ್ಲ. ಆಂತರಿಕ ಆಲೋಚನೆಯ ಬಾಹ್ಯ ಅಭಿವ್ಯಕ್ತಿಯೇ ಭಾಷೆ. ಇಂದು ಬಹುಭಾಷಾ ಕಲಿಕೆಗೆ ತಂತ್ರಜ್ಞಾನದ ಅಗತ್ಯವಿದೆ. ಭಾಷೆಯೇ ನಮ್ಮನ್ನು ಆಯ್ದುಕೊಂಡರೂ ನಾವೇ ಭಾಷೆಯನ್ನು ಆಯ್ದುಕೊಂಡರೂ ಬದುಕಿನ ಭಾಗವಾಗದ ಹೊರತು ಯಾವ ಭಾಷೆಯೂ ನಮ್ಮದಾಗುವುದಿಲ್ಲ ಎಂದರು.

ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿಯ ಬಗ್ಗೆ ಸಮೂಹ ಗಾಯನ ಸ್ಪರ್ಧೆ ನಡೆಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಪ್ರಶಾಂತಿ ಎನ್., ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಶಿವಾನಿ ಮಲ್ಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲ ಡಾ.ವಿಜಯಕುಮಾರ್ ಮೊಳೆಯಾರ ಸ್ವಾಗತಿಸಿದರು. ಯಕ್ಷಕಲಾ ಕೇಂದ್ರದ ನಿರ್ದೇಶಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.