ಜಿಲ್ಲೆ

ಸಿನಿಮಾರಂಗದಲ್ಲಿ ಚಿತ್ರ ನಿರ್ಮಾಣ ಕಷ್ಟದ ಕೆಲಸ: ಮೋಹನ್ ಅಪ್ಪಾಜಿ

ಮಡಿಕೇರಿ: ರಾಷ್ಟ್ರ ಪ್ರಶಸ್ತಿ ವಿಜೇತ ಕಂದೀಲು ಕನ್ನಡ ಚಲನಚಿತ್ರದ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಿತು.

ಮೇಕೇರಿಯ ಕೂರ್ಗ್ ಗವದನ ರೆಸಾರ್ಟ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶೋಧ ಪ್ರಕಾಶ್ ಅವರು, ನನ್ನ ನಿರ್ದೇಶನದ ಕಂದೀಲು ಕನ್ನಡ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರತ್ತಿರುವುದು ಸಂತೋಷ ಮತ್ತು ಹೆಮ್ಮೆ ಎನಿಸಿದೆ. ಈ ಪ್ರಶಸ್ತಿ ಸಿನಿರಂಗದಲ್ಲಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿರುವ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಕಲಾವಿದರನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲೂ ಟ್ರಸ್ಟ್ ಉತ್ತಮ ಕಾರ್ಯಚಟುವಟಿಕೆಗಳೊಂದಿಗೆ ಮತ್ತಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಟ್ರಸ್ಟ್‌ನ ಗೌರವಾಧ್ಯಕ್ಷ ಹಾಗೂ ಸರ್ಕಾರಿ ಆಸ್ಪತ್ರೆಯ ತುರ್ತು ಘಟಕದ ಮುಖ್ಯಸ್ಥ ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ಮಾತನಾಡಿ, ಏಳುಬೀಳಿನ ಸಿನಿಮಾರಂಗದಲ್ಲಿ ಚಿತ್ರ ನಿರ್ಮಾಣ ಕಷ್ಟದ ಕೆಲಸವಾಗಿದೆ. ಆದರೆ, ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ಕೊಡಗು ಜಿಲ್ಲೆಯ ಗ್ರಾಮ ಮಟ್ಟದಿಂದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯವರೆಗೂ ಬೆಳೆದು ನಿಂತಿರುವುದು ಮಹಾ ಸಾಧನೆಯೇ ಆಗಿದೆ ಎಂದು ಬಣ್ಣಿಸಿದರು.

ಸರ್ಕಾರಿ ಅಭಿಯೋಜಕ ಶ್ರೀಧರನ್ ನಾಯರ್ ಮಾತನಾಡಿ, ಸಂಘ ಸಂಸ್ಥೆಗಳು ಸಾಧಕರನ್ನು ಸನ್ಮಾನಿಸಿ ಉತ್ತೇಜಿಸುವ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಸಮಾಜಮುಖಿವಾಗಿ ಕಾರ್ಯ ನಿರ್ವಹಿಸುತ್ತಿರುವ ಟ್ರಸ್ಟ್ ಈ ರೀತಿಯ ಉತ್ತಮ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯವೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್‌ನ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಯಾವುದೇ ಕಾರ್ಯವನ್ನು ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಮಾಡಿದರೆ ಅರ್ಹತೆ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಯಶೋಧ ಪ್ರಕಾಶ್ ಅವರೇ ಉತ್ತಮ ಸಾಕ್ಷಿಯಾಗಿದ್ದಾರೆ ಮತ್ತು ಎಲ್ಲರಿಗೂ ಮಾದರಿ ಮಹಿಳೆಯಾಗಿದ್ದಾರೆ ಎಂದು ಬಣ್ಣಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಯಶೋಧ ಪ್ರಕಾಶ್ ಅವರನ್ನು ಈರಮಂಡ ಹರಿಣಿ ವಿಜಯ್, ಡಾ.ಕೋಲೆಯಂಡ ಮೋಹನ್ ಅಪ್ಪಾಜಿ ಹಾಗೂ ಶ್ರೀಧರನ್ ನಾಯರ್ ಅವರು ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭ ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ)ಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ಮೋಹನ್ ಅಪ್ಪಾಜಿ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯದಲ್ಲಿ ನಡೆದ ವೈದ್ಯಕೀಯ ರಾಜ್ಯ ಸಮಾವೇಶದಲ್ಲಿ ಆಕರ್ಷಕ ಮತ್ತು ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ನೀಡಿದ ಟ್ರಸ್ಟ್‌ನ ಸದಸ್ಯರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷರಾದ ನಿಶಾ ಮೋಹನ್, ಟ್ರಸ್ಟಿ ಕೆ.ಎಂ.ಗಣೇಶ್, ಖಜಾಂಚಿ ಕೂಡಂಡ ದೀಪ ಕಾವೇರಪ್ಪ, ಸದಸ್ಯರುಗಳಾದ ಎಂ.ಪಿ.ಕೃಷ್ಣರಾಜು, ಡೆನ್ನಿ ಮೋರಸ್, ಅನಿಲ್ ಕೃಷ್ಣಾನಿ, ಪ್ರಮಿತ, ಮಂಜುಳಾ ಶಿವಕುಮಾರ್, ರಾಧಾ, ಸುಚಿತ ಕಾವೇರಪ್ಪ, ಮೈನಾ, ಸ್ವೀಟಿ ಹಾಗೂ ನೃತ್ಯ ಬಳಗದ ಸದಸ್ಯರುಗಳು ಉಪಸ್ಥಿತರಿದ್ದರು.