ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಉತ್ಸವಕ್ಕೆ ಚಿತ್ರನಟ ಡಾ.ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಪಟ್ಟಣದ ಪುರಸಭಾ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರೊಂದಿಗೆ ಸಭೆ ನಡೆಸಿ ಬಳಿಕ ಅವರು ಮಾತನಾಡಿದರು.
ಅ.4ರಿಂದ 7ರವರೆಗೆ ನಾಲ್ಕು ದಿನಗಳ ಕಾಲ ಶ್ರೀರಂಗಪಟ್ಟಣ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.
ತಾಲೂಕಿನ ಕಿರಂಗೂರು ವೃತ್ತದಲ್ಲಿರುವ ಬನ್ನಿಮಂಟದಲ್ಲಿ ಅ.4ರಂದು ವಿವಿಧ ಧಾರ್ಮಿಕ ಹಾಗೂ ಸಂಪ್ರದಾಯ ಕಾರ್ಯಕ್ರಮಗಳ ಬಳಿಕ ಮಧ್ಯಾಹ್ನ 3 ಗಂಟೆಗೆ ನಾಡದೇವತೆ ಹೊತ್ತ ಜಂಬೂಸವಾರಿಗೆ ರಾಜ್ಯ ಸರ್ಕಾರದ ಜನಪ್ರತಿನಿಧಿಗಳೊಂದಿಗೆ ಚಿತ್ರನಟ ಡಾ.ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ.
ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಯಲ್ಲಿ 3 ಆನೆಗಳು ಭಾಗಿಯಾಗುತ್ತಿದ್ದು, ಅಂಬಾರಿ ಸಾಗುವ ಮಾರ್ಗದುದ್ದಕ್ಕೂ ರಾಜ್ಯ ಹಾಗೂ ಸ್ಥಳೀಯ ಜಾನಪದ ಕಲಾ ತಂಡಗಳು ಸೇರಿದಂತೆ ಸಾಕಷ್ಟು ವೈವಿಧ್ಯಮಯ ಕಲಾ-ನೃತ್ಯ ತಂಡಗಳು ಸರ್ಕಾರದ ವಿವಿಧ ಇಲಾಖೆಗಳ ಟ್ಯಾಬ್ಲೋಗಳೊಂದಿಗೆ ಭಾಗಿಯಾಗಲಿವೆ. ಪೊಲೀಸ್ ಬ್ಯಾಂಡ್, ಅಶ್ವದಳ ಹಾಗೂ ಅಗ್ನಿಶಾಮಕದಳವೂ ಇರಲಿವೆ ಎಂದು ತಿಳಿಸಿದರು.
ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಸಾಂಸ್ಕೃತಿಕ ದಸರಾ ಆಚರಣೆಗೆ ಬೃಹತ್ ವೇದಿಕೆ ಹಾಗೂ ಮಾರಾಟ ಮಳಿಗೆಗಳ ನಿರ್ಮಾಣವಾಗುತ್ತಿದ್ದು, ಜನರ ವೀಕ್ಷಣೆಗೆ ಆಸನಗಳ ವ್ಯವಸ್ಥೆ, ಶೌಚಗೃಹ, ವೈದ್ಯಕೀಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅ.4ರ ಸಂಜೆ ರಾಜ್ಯ ಸರ್ಕಾರದ ಸಚಿವರು, ಜಿಲ್ಲೆಯ ಹಾಲಿ, ಮಾಜಿ ಜನಪ್ರತಿನಿಧಿಗಳೊಂದಿಗೆ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಮೊದಲನೇ ದಿನದ ಸಂಗೀತ ರಸ ಸಂಜೆಯನ್ನು ಗಾಯಕ ವಾಸುಕಿ ವೈಭವ್ ತಂಡ, ಅ.5ರಂದು ಖ್ಯಾತ ಗಾಯಕ ವಿಜಯಪ್ರಕಾಶ್ ತಂಡ, ಅ.6ರಂದು ಲಗೋರಿ ಕಲಾತಂಡ ಹಾಗೂ ರ‌್ಯಾಪ್ ಗಾಯಕ ಆಲ್ ಓಕೆ ತಂಡ, ಅ.7ರ ಕೊನೆಯ ದಿನದಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ ಎಂದರು.
ಇದರೊಂದಿಗೆ ಸ್ಥಳಿಯ ಕಲಾವಿದರು ಹಾಗೂ ಸಾಹಿತಿಗಳಿಗೂ ಮನ್ನಣೆ ನೀಡುವ ಉದ್ದೇಶದಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಕವಿಗೋಷ್ಠಿ, ಸಾಹಿತ್ಯಗೋಷ್ಠಿ, ಮಹಿಳಾಗೋಷ್ಠಿ ನಾಟಕ, ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಯುವ ದಸರಾ ಸೇರಿದಂತೆ ಸಾಕಷ್ಟು ಜಾನಪದ ಕಲಾತಂಡಗಳ ಆಯೋಜನೆಗೆ ವೇದಿಕೆ ನೀಡಲಾಗುತ್ತಿದೆ. ಇದರೊಂದಿಗೆ ಯೋಗ ದಸರಾ, ಚಾರಣ, ಕುಸ್ತಿ ಸೇರಿದಂತೆ ವಿವಿಧ ಚಟುವಟಿಕೆ, ಕ್ರೀಡಾ ದಸರಾ, ಹಾಲು ಕರೆಯುವ ಸ್ಪರ್ಧೆ, ಕೃಷಿ ಮೇಳ, ರೈತ ದಸರಾ, ರಾಜ್ಯ ಹಾಗೂ ವಿವಿಧ ರಾಜ್ಯಗಳ ವಿಶೇಷ ಖಾದ್ಯದ ಆಹಾರ ಮೇಳ, ಉಚಿತ ಆರೋಗ್ಯ ಮೇಳ ಆಯೋಜಿಸಲಾಗುತ್ತಿದೆ ಎಂದರು.
ಈ ಬಾರಿ ಮಕ್ಕಳ ದಸರಾ ಪ್ರಯುಕ್ತ ಸಿನಿಮೋತ್ಸವ ಹಮ್ಮಿಕೊಂಡಿದ್ದು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ತಾಲೂಕಿನ ವಿವಿಧ ಚಿತ್ರಮಂದಿರಗಳಲ್ಲಿ ಉಚಿತವಾಗಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಪರಿಶೀಲನೆ, ಸ್ವಚ್ಛತೆ, ರಕ್ಷಣೆ, ಗೌರವ ಕಡ್ಡಾಯ: ಇದಕ್ಕೂ ಮೊದಲು ತಾಲೂಕಿನ ಕಿರಂಗೂರು ವೃತ್ತದ ಬಳಿ ಬನ್ನಿಮಂಟಪ, ಜಂಬೂ ಸವಾರಿ ಸಾಗುವ ಮೈಸೂರು-ಬೆಂಗಳೂರು ಹೆದ್ದಾರಿಯ ಮಾರ್ಗ ಹಾಗೂ ದಸರಾ ಕಾರ್ಯಕ್ರಮ ನಡೆಯುವ ಶ್ರೀರಂಗನಾಥಸ್ವಾಮಿ ಮೈದಾನವನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಅಧಿಕಾರಿ, ಸಿಬ್ಬಂದಿ ಜತೆ ಚರ್ಚೆ ನಡೆಸಿ, ದಸರಾ ವೇದಿಕೆಯನ್ನು ವಿಸ್ತಾರವಾಗಿ ನಿರ್ಮಿಸಲು ಕ್ರಮ ವಹಿಸುವ ಜತೆಗೆ ವಿವಿಧ ಸ್ಥಳಗಳಲ್ಲಿ ಸಿಸಿ ಟಿವಿಗಳ ಅಳವಡಿಕೆಗೆ ಸೂಚನೆ ನೀಡಿದರು.
ಜಂಬೂಸವಾರಿ ಸಾಗುವ ವೇಳೆ ವಿದ್ಯುತ್ ತಂತಿ ತಗುಲದಂತೆ ವಿದ್ಯುತ್ ಕಂಬಗಳನ್ನು ಎತ್ತರಿಸುವಂತೆ ಕಳೆದ ಸಾರಿ ನಡೆದ ಪ್ರಕರಣವನ್ನು ಜ್ಞಾಪಿಸಿ ಪಟ್ಟಣದ ಪೇಟೆ ಬೀದಿಗಳಲ್ಲಿನ ಸಮಸ್ಯೆ ಕುರಿತು ಎಚ್ಚರಿಸಿದರು. ಆಹಾರ ಮೇಳದಲ್ಲಿ ಭಾಗಿಯಾಗುವ ಮಾರಾಟಗಾರರು ಕಡ್ಡಾಯವಾಗಿ ಪರವಾನಗಿ ಪತ್ರ ಹೊಂದಬೇಕು, ಆಹಾರ ನಿರೀಕ್ಷಕರು ಕಡ್ಡಾಯವಾಗಿ ಆಹಾರ ಪರಿಶೀಲನೆ ನಡೆಸಬೇಕು ಜತೆಗೆ ವ್ಯಾಪಾರಿಗಳು ವಸ್ತ್ರ ಸಂಹಿತೆ ಕಾಯ್ದುಕೊಳ್ಳಲು ಎಚ್ಚರವಹಿಸಬೇಕು. ಸಣ್ಣ ತ್ಯಾಜ್ಯ ಕಂಡುಬಾರದಂತೆ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಎಚ್ಚರಿಸಿದರು.
ಪಟ್ಟಣವನ್ನು ತಳಿರು-ತೋರಣಗಳ ಅಲಂಕಾರದಲ್ಲಿ ಪುರಸಭೆ ಕ್ರಮ ವಹಿಸಬೇಕು, ವಿದ್ಯುತ್ ದೀಪಾಲಂಕಾರ ಹಾಗೂ ಸಮಸ್ಯೆಗಳ ನಿರ್ವಹಣೆ ಕುರಿತು ಸೆಸ್ಕ್ ಜವಾಬ್ದಾರಿ, ದಸರಾ ಮಹೋತ್ಸವದ ಸಂಪೂರ್ಣ ಭದ್ರತೆಯಲ್ಲಿ ಪೊಲೀಸ್ ಇಲಾಖೆ ಎಲ್ಲ ಮುಂಜಾಗ್ರತೆ ವಹಿಸಬೇಕು. ದಸರಾ ಆಚರಣೆಗೆ ಗಣ್ಯರು, ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಿ-ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಸಂಘ ಸಂಸ್ಥೆಗಳಿಗೆ ಪ್ರತಿಯೊಬ್ಬರ ನಿಖರ ಹೆಸರುಗಳೊಂದಿಗೆ ಉಲ್ಲೇಖಿಸಿ ಅಧಿಕೃತ ವ್ಯಕ್ತಿಗಳಿಗೆ ತಾಲೂಕು ಆಡಳಿತ ಹಾಗೂ ಪಂಚಾಯಿತಿ ಅಧಿಕಾರಿಗಳು ಖುದ್ದು ಆಮಂತ್ರಣ ನೀಡಿ ಆಹ್ವಾನಿಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಪಾಂಡವಪುರ ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಡಿವೈಎಸ್ಪಿ ಎಚ್.ಎಸ್.ಮುರಳಿ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಸೆಸ್ಕ್ ಎಇಇ ಮಂಜುನಾಥ್ ಪ್ರಸಾದ್, ಬಿಇಒ ಆರ್.ಪಿ.ಮಹೇಶ್ ಇತರರು ಉಪಸ್ಥಿತರಿದ್ದರು.