ಸಾಗರ: ದಲಿತರನ್ನು ಅವಮಾನಿಸಿರುವ ಶಾಸಕ ಆರಗ ಜ್ಞಾನೇಂದ್ರ ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ನಗರ ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಆರಗ ಜ್ಞಾನೇಂದ್ರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣದ ಬಗ್ಗೆ ಹಗುರುವಾದ ಹೇಳಿಕೆ ನೀಡುವ ಮೂಲಕ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ದಲಿತರನ್ನು ಅವಮಾನಿಸಿ, ಕೀಳಾಗಿ ಮಾತನಾಡಿ, ಕಪ್ಪುಬಣ್ಣವನ್ನು ಹೋಲಿಕೆ ಮಾಡಿರುವ ಆರಗ ಜ್ಞಾನೇಂದ್ರ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿ, ಕೂಡಲೆ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕ ಅಧ್ಯಕ್ಷ ಎಲ್.ಚಂದ್ರಪ್ಪ ಮಾತನಾಡಿ, ಬಿಜೆಪಿಯವರು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸುವ ಮೂಲಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಪಕ್ಷ ದಲಿತ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ಣದ ಆಧಾರದ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಚಾಳಿಯಾಗಿದೆ. ದಲಿತ ಸಮುದಾಯದವರನ್ನು ಸುಟ್ಟು ಕರಕಲಾಗಿರುವ ವ್ಯಕ್ತಿಗಳು ಎಂದು ಅವಮಾನಿಸಿದ್ದು ಖಂಡನೀಯ. ತಕ್ಷಣ ಆರಗ ಜ್ಞಾನೇಂದ್ರ ಅವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಮಧುಮಾಲತಿ, ಸುಮಂಗಲಾ ರಾಮಕೃಷ್ಣ, ಸಬೀನಾ ತನ್ವೀರ್, ನಾಗರತ್ನಾ ನಾರಾಯಣಪ್ಪ, ಮಹಾಬಲ ಕೌತಿ, ಡಿ.ದಿನೇಶ್, ಅನ್ವರ್ ಬಾಷಾ, ರಫೀಕ್ ಬಾಬಾಜಾನ್, ಮಂಜುಳಾ, ವಿ.ಶಂಕರ್, ಗಣಪತಿ ಮಂಡಗಳಲೆ, ಲಕ್ಷ್ಮಣ್ ಸಾಗರ್, ನಾರಾಯಣ ಅರಮನೆಕೇರಿ, ಶಿವಪ್ಪ, ರವಿ ಜಂಬಗಾರು, ರವಿ ಜಂಬೂರುಮನೆ, ಮೈಕಲ್ ಡಿಸೋಜ, ತಾರಾಮೂರ್ತಿ, ಗಿರೀಶ್ ಕೋವಿ ಇತರರಿದ್ದರು.