ರಾಯಚೂರು: ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮುಸ್ಲಿಂ ಸಮಾಜದ ಮುಖಂಡರು ಒತ್ತಾಯಿಸಿದೆ.
ಮುಖಂಡರ ನಿಯೋಗ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್‌ಗೆ ಮಂಗಳವಾರ ಮನವಿ ಸಲ್ಲಿಸಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಹಿಂದು ಜಾಗರಣಾ ವೇದಿಕೆಯ ಹನುಮ ಮಾಲಾ ವಿಸರ್ಜೆ ಮತ್ತು ಸಂಕೀರ್ತನಾ ಸಭೆಯಲ್ಲಿ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿರುವುದನ್ನ ಖಂಡಿಸಿದರು.
ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ದಿನಕ್ಕೆ ಒಬ್ಬ ಗಂಡ ಇರುತ್ತಿದ್ದ. ಪ್ರಧಾನಿ ಮೋದಿ ಮುಸ್ಲಿಂ ಮಹಿಳೆಯರಿಗೆ ಒಬ್ಬರ ಪರ್ಮನೆಂಟ್ ಗಂಡನನ್ನು ನೀಡಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿದ್ದಾರೆ. ಇದು ಎಲ್ಲ ಮಾಧ್ಯಮಗಳ್ಲಿ ಪ್ರಸಾರವಾಗಿದೆ.
ಇಂತಹ ಹೇಳಿಕೆಗಳು ಧರ್ಮ ಧರ್ಮಗಳ ನಡುವೆ ವೈಷಮ್ಯ ಉಂಟು ಮಾಡುತ್ತಿದ್ದು, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುತ್ತಿದ್ದಾರೆ. ಜತೆಗೆ ಮುಸ್ಲಿಂ ಮಹಿಳೆಯರ ಘನತೆಗೆ ಧಕ್ಕೆ ತಂದಿದ್ದಾರೆ.
ಕೂಡಲೇ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಮುಖಂಡರಾದ ಡಾ.ರಜಾಕ್ ಉಸ್ತಾದ್, ಎಂ.ಎ.ರಹೀಮ್ ಖುರೇಶಿ, ಮಹ್ಮದ್ ಅಜೀಮ್, ಸೈಯದ್ ಖೈಸರ್ ಹುಸೇನ್, ಸೈಯದ್ ಅಮೀನ್ ಹುಸೇನ್ ಇದ್ದರು.