ತಾಯೂರು ಪ್ರಕಾಶ್  
ಜಿಲ್ಲೆ

ಅಸಂಬದ್ಧ ಮಾತುಗಳನ್ನಾಡಿದರೆ ದೂರು ದಾಖಲು

ತಿ.ನರಸೀಪುರ: ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜವಂಶಸ್ಥರಲ್ಲ ಎಂಬ ಹೇಳಿಕೆ ನೀಡಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತೊಮ್ಮೆ ಇಂತಹ ಅಸಂಬದ್ಧ ಮಾತುಗಳನ್ನಾಡಿದರೆ ದೂರು ದಾಖಲಿಸುವುದರ ಜತೆಗೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ತಾಯೂರು ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.

ಲಕ್ಷ್ಮಣ್ ಇಂತಹ ಹೇಳಿಕೆ ನೀಡುವ ಮೂಲಕ ಮೈಸೂರು ಸಂಸ್ಥಾನದ ರಾಜಮನೆತನಕ್ಕೆ ಅಗೌರವ ತೋರಿದ್ದಾರೆ. ಇದು ಕೇವಲ ರಾಜಮನೆತನಕ್ಕೆ ಮಾಡಿದ ಅಪಮಾನವಲ್ಲ. ಬದಲಾಗಿ ನಾಡಿನ ಜನತೆಗೆ ಮಾಡಿದ ಅಪಮಾನವಾಗಿದ್ದು, ಕೂಡಲೇ ಅವರಾಡಿರುವ ಮಾತಿಗೆ ಕ್ಷಮೆ ಕೇಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಮೈಸೂರು ರಾಜಮನೆತನಕ್ಕೆ 800 ವರ್ಷಗಳ ಇತಿಹಾಸವಿದೆ. ಪಾರಂಪರಿಕ ಮನೆತನದ ಬಗ್ಗೆ ಅಗೌರವ ತೋರುವ ರೀತಿಯಲ್ಲಿ ಹೇಳಿಕೆ ಮರುಕಳಿಸಬಾರದು. ಮತ್ತೆ ಹಗುರವಾಗಿ ಮಾತನಾಡಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೈಸೂರು ಮಹಾರಾಜರ ಬಗ್ಗೆ ನಾಯಕ ಸಮುದಾಯಕ್ಕೆ ವಿಶೇಷವಾದ ಗೌರವವಿದೆ. ರಾಜಮನೆತನಕ್ಕೂ ನಾಯಕ ಸಮಾಜದ ಮೇಲೆ ಅಪಾರವಾದ ಪ್ರೀತಿ ಇದೆ. ಹಾಗಾಗಿ ರಾಜವಂಶಸ್ಥರ ಬಗ್ಗೆ ಕೀಳಾಗಿ ಮಾತನಾಡಿದರೆ ನಾಯಕ ಸಮಾಜ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದೆ ಎಂದರು.

ವಿಶ್ವ ಋಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸೋಮೇಶ್ವರಪುರ ಕೃಷ್ಣನಾಯಕ, ನಿರ್ದೇಶಕ ವಾಲ್ಮೀಕಿ ನಿಂಗರಾಜು, ಸೂರಹಳ್ಳಿ ಮಹದೇವ ನಾಯಕ, ಯಡದೊರೆ ದೇವರಾಜು, ಮಹರ್ಷಿ ವಾಲ್ಮೀಕಿ ಚಾರಿಟಬಲ್ ಅಧ್ಯಕ್ಷ ಯಡದೊರೆ ಮಹೇಶ್ ನಾಯಕ್ ಸುದ್ದಿಗೋಷ್ಠಿಯಲ್ಲಿದ್ದರು.