ಜಿಲ್ಲೆ

ಯೋಜನೆಯಲ್ಲಿ ಲೋಪ ಕಂಡುಬಂದರೆ ದೂರು ಸಲ್ಲಿಸಿ

ದಾಂಡೇಲಿ: ಸರ್ಕಾರದ ವಿವಿಧ ಇಲಾಖೆಗಳಿಗೆ ಮಂಜೂರಾದ ಅನುದಾನದ ಸದುಪಯೋಗ ಹಾಗೂ ಗುಣಮಟ್ಟದ ಯೋಜನೆಗಳು ಕಾರ್ಯ ರೂಪಕ್ಕೆ ತರುವ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳದ್ದಾಗಿರುತ್ತದೆ. ಯೋಜನೆಗಳ ಅನುಷ್ಠಾನದಲ್ಲಿ ಲೋಪದೋಷ ಕಂಡು ಬಂದಲ್ಲಿ ಸಾರ್ವಜನಿಕರು ಜಿಲ್ಲೆಯ ಲೋಕಾಯುಕ್ತ ಕಚೇರಿಗೆ ಲಿಖಿತ ದೂರು ಸಲ್ಲಿಸಬೇಕು ಎಂದು ಜಿಲ್ಲಾ ಲೋಕಾಯುಕ್ತ ಕಚೇರಿ ಮುಖ್ಯಸ್ಥ ಎಸ್.ಪಿ. ಕುಮಾರಚಂದ್ರ ತಿಳಿಸಿದರು.

ನಗರಸಭೆಯಲ್ಲಿ ಕಾರವಾರದ ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಮಾಹಿತಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸಲಾದ ಮನೆಗಳ ವಿತರಣೆಯಲ್ಲಿ ಫಲಾನುಭವಿಗಳಿಗೆ ಹಣದ ಬೇಡಿಕೆ ಇಡಲಾಗುತ್ತದೆ ಎಂಬ ದೂರಿನ ಕುರಿತು ಸ್ಪಷ್ಟ ಮಾಹಿತಿಯನ್ನು ಇಲಾಖೆಗೆ ನೀಡಬೇಕು ಎಂದು ಸೂಚಿಸಿದರು.

ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಕ್ರಮ- ಸಕ್ರಮದ ಬಗ್ಗೆ ಸರ್ಕಾರದಿಂದ ಸೂಕ್ತ ನಿರ್ದೇಶನ ಬಂದರೆ ನಗರಸಭೆಗೆ ಹಾಗೂ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ. ಈ ಕುರಿತು ಸೂಕ್ತ ಆದೇಶ ಬರಬೇಕೆಂಬ ಸಾರ್ವಜನಿಕರ ಬೇಡಿಕೆಗೆ ಜಿಲ್ಲಾ ಲೋಕಾಯುಕ್ತ ಅಧಿಕಾರಿ ಕುಮಾರಚಂದ್ರ ಹಾಗೂ ಲೋಕಾಯುಕ್ತ ಅಧಿಕಾರಿ ವಿನಾಯಕ ಬಿಲ್ಲಾ ಈ ಕುರಿತು ಸೂಕ್ತ ಕ್ರಮಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಟೌನ್‌ಶಿಪ್‌ನ ನಗರಸಭೆಯ ಕಟ್ಟಡ 40 ವರ್ಷಕ್ಕಿಂತ ಹಳೆಯದಾಗಿದ್ದು, ದುಸ್ಥಿತಿಯಲ್ಲಿದೆ. ಕಟ್ಟಡದಲ್ಲಿ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಓದುವ ಖಾಸಗಿ ಶಿಕ್ಷಣ ಸಂಸ್ಥೆಯ ಕಟ್ಟಡ ಕುಸಿದು ಅನಾಹುತ ಸಂಭಂವಿಸಿದರೆ ಯಾರು ಹೊಣೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಲೋಕಾಯುಕ್ತ ಅಧಿಕಾರಿಗಳು ಈ ಕುರಿತು ಶಾಲೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ತಹಸೀಲ್ದಾರ್ ಶೈಲೇಶ ಪರಮಾನಂದ, ವಿವಿಧ ಇಲಾಖೆಯ ಅಧಿಕಾರಿಗಳು, ಲೋಕಾಯುಕ್ತ ಇಲಾಖೆ ಸಿಬ್ಬಂದಿ ಇದ್ದರು.