ಜಿಲ್ಲೆ

ದೊಡ್ಮನೆ ಸೊಸೆಯ Deepfake ವಿಡಿಯೋ ಹರಿಬಿಟ್ಟ ಕಿಡಿಗೇಡಿ ​ವಿರುದ್ಧ ದೂರು ದಾಖಲು

ಬೆಂಗಳೂರು: ಸ್ಯಾಂಡಲ್​​ವುಡ್​ ನಟ ಪುನೀತ್​ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಅವರ ಡೀಪ್​ಫೇಕ್​ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಿಡಿಗೇಡಿಯೋರ್ವ ಅತಿರೇಕ ಪ್ರದರ್ಶಿಸಿದ್ದನು. ಹೀಗೆ ಅಸಹ್ಯವಾಗಿ ಟ್ರೋಲ್​ ಮಾಡಿದ್ದ ಕಿಡಿಗೇಡಿ ವಿರುದ್ಧವಾಗಿ ದೊಡ್ಮನೆ ಅಭಿಮಾನಿಗಳು ದೂರು ಸಲ್ಲಿಕೆ ಮಾಡಿದ್ದಾರೆ.

ಪುನೀತ್​ ರಾಜ್​​ಕುಮಾರ್​ ಅವರ ಪತ್ನಿ ಅಶ್ವಿನಿ ಅವರ ಕುರಿತಾಗಿ ಅಸಹ್ಯವಾಗಿ ಟ್ರೋಲ್​ ಮಾಡಿದ್ದ ಯೋಗೇಂದ್ರ ಪ್ರಸಾದ್​ ಎಂಬ ವ್ಯಕ್ತಿ ಕುರಿತಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಅಭಿಮಾನಿಗಳು ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

ನಡೆದಿದ್ದೇನು?: ಯೋಗೇಂದ್ರ ಪ್ರಸಾದ್​ ಎಂಬ ಟ್ವಿಟರ್​ ಖಾತೆಯಲ್ಲಿ ಡೀಪ್​ಫೇಕ್​ ವಿಡಿಯೋ ಹಂಚಿಕೊಳ್ಳಲಾಗಿದ್ದು, ಗಂಡ ಸತ್ತ ಮು** ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ 29 October 2024 ರಂದು ನಾನು ವಿವಾಹ ವಾಗಲಿದ್ದೇನೆ. ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು, ರಾಜವಂಶದ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ. ಸ್ಥಳ : ಶ್ರೀ ಕಂಠೀರವನಗರ ಸ್ಟುಡಿಯೋ, ನಾರ್ತ್ ವೆಸ್ಟ್ ಬೆಂಗಳೂರು ಎಂದು ಬರೆಯಲಾಗಿದೆ.

ಟ್ವಿಟರ್​ನಲ್ಲಿ ಕೇವಲ 100 ಫಾಲೋವರ್ಸ್​ ಹೊಂದಿರುವ ಯೋಗೇಂದ್ರ ಎಂಬ ಹೆಸರಿನ ಈ ವ್ಯಕ್ತಿಯೂ ರಾಜವಂಶದ ಅಭಿಮಾನಿ ಮತ್ತು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಬಿನ್ನಿಪೇಟೆ ಅಧ್ಯಕ್ಷ ಎಂದು ತನ್ನ ಬಯೋನಲ್ಲಿ ಹಾಕಿಕೊಂಡಿದ್ದಾನೆ.

ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ಡೀಪ್​ಫೇಕ್​ ವಿಡಿಯೋ ನೋಡಿ ಕಿಡಿಕಾರಿರುವ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್​ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ದೂರು ಸ್ವೀಕರಿಸಿ ಮಾತನಾಡಿರುವ ಅಧ್ಯಕ್ಷ ಎನ್​ಎಂ ಸುರೇಶ್, ‘ಈ ರೀತಿ ಘಟನೆ ಇತ್ತೀಚೆಗೆ ಹೆಚ್ಚಾಗುತ್ತಿದೆ, ಚಿತ್ರರಂಗದಲ್ಲಿ ಎಲ್ಲರೂ ಒಂದು ಕುಟುಂಬ ಇದ್ದ ಹಾಗೆ. ಯಾರೂ ಈ ರೀತಿ ಕೃತ್ಯ ಮಾಡಬಾರದು, ಈ ಬಗ್ಗೆ ಕಮಿಷನರ್, ಸೈಬರ್ ಕ್ರೈಂ ಗೆ ದೂರು ಕೊಡುತ್ತೀವಿ’ ಎಂದು ಭರವಸೆ ನೀಡಿದ್ದಾರೆ.

ಸಾರಾ ಗೋವಿಂದು ಮಾತನಾಡಿ, ‘ಕೆಲ ಕಿಡಿಗೇಡಿಗಳು ಈ ರೀತಿ ಕೃತ್ಯ ಮಾಡುತ್ತಿದ್ದಾರೆ. ಇಂತ ಕೆಲಸ ಮಾಡುವವರು ರಣಹೇಡಿಗಳು, ಧೈರ್ಯ ಇದ್ದರೆ ಮುಂದೆ ಬಂದು ಮಾತಾಡಲಿ, ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ದೂರು ಕೊಡುತ್ತೇವೆ. ರಾಜ್ ಕುಮಾರ್ ಕುಟುಂಬಕ್ಕೆ ಒಂದು ಬೆಲೆಯಿದೆ, ಕರ್ನಾಟಕ ಚಿತ್ರ ರಂಗದ ಗೌರವ ಹಾಳುಮಾಡಬೇಡಿ. ಈ ರೀತಿ ಕೃತ್ಯ ಮಾಡಿದವರ ವಿರುದ್ಧ ಕ್ರಮ ಆಗುತ್ತೆ’ ಎಂದಿದ್ದಾರೆ.