ಜಿಲ್ಲೆ

ಶಾಸಕ ಇಕ್ಬಾಲ್ ಹುಸೇನ್ ವಿರುದ್ದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು

ಕನಕಪುರ: ತಾಲೂಕಿನ ಅಚ್ಚಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಂಗಾಣಿ ದೊಡ್ಡಿ ಗ್ರಾಮದ ಇಡೀ ಸ್ವತ್ತನ್ನೇ ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡ ಆರೋಪದ ಮೇರೆಗೆ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸೇರಿದಂತೆ ಆರು ಮಂದಿಯ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಶಾಸಕ ಇಕ್ಬಾಲ್ ಹುಸೇನ್ ಕನಕಪುರ ತಹಶೀಲ್ದಾರ್ ಮಂಜುನಾಥ್ , ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್ , ಶಿರಸ್ತೆದಾರ್ ಜಗದೀಶ್ , ಕಂದಾಯ ನಿರೀಕ್ಷಕ ರಜತ್, ಗ್ರಾಮಲೆಕ್ಕಿಗ ರಮೇಶ್ ಹಾಗೂ ಈ ಹಿಂದೆ ಕನಕಪುರ ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದ ಸ್ಮಿತಾ ರಾಮು ಎಂಬುವರ ವಿರುದ್ಧ ಲೋಕಾದಲ್ಲಿ ದೂರು ದಾಖಲಾಗಿದೆ. ಬುಧವಾರ ನಗರದ ತಾಲೂಕ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತರಿಂದ ಜರುಗಿದ ಕುಂದು ಕೊರತೆ ಸಭೆಯಲ್ಲಿ ಹೊಂಗಾಣಿದೊಡ್ಡಿ ಗ್ರಾಮಸ್ಥರು, ಮೂರು ತಲೆಮಾರಿನಿಂದ ವಾಸಿಸುತ್ತಿರುವ ರೈತರ ಮನೆ, ಹೊಲ ಸೇರಿ ಇಡೀ ಗ್ರಾಮವನ್ನೇ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡು ನಮ್ಮನ್ನು ಬೀದಿ ಪಾಲು ಮಾಡಲು ಯತ್ನಿಸಿದ್ದಾರೆಂದು ಲೋಕಾಯುಕ್ತ ಎಸ್‌ಪಿ ಸ್ನೇಹ ಅವರ ಮುಂದೆ ಆಳಲು ತೋಡಿಕೊಂಡಿದ್ದರು. ಗುರುವಾರ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಗ್ರಾಮಸ್ಥರ ಪರವಾಗಿ ದೂರು ನೀಡಿದ್ದರು.