ಭೂಸ್ವಾಧಿನ ವಿರೋಧಿಸಿ ಆನೇಕಲ್​ ತಾಲೂಕಿನ ಹಂದೇನಹಳ್ಳಿಯಲ್ಲಿ ಸುರಿಯುವ ಮಳೆಯ ನಡುವೆ ರೈತ ಹೋರಾಟಗಾರ ಯಶವಂತ್​ ಸುದೀರ್ ಭಾಷಣ ಮಾಡಿದರು. ರೈತ ಹೋರಾಟಗಾರ ಮಳ್ಳೂರು ಶಿವಣ್ಣ, ಹೋರಾಟಗಾರರಾದ ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ, ರಾವಣ, ಎಂ.ಸಿ ಹಳ್ಳಿ ವೇಣು, ಅತ್ತಿಬೆಲೆ ಮಂಜುನಾಥ್​ ದೇವು, ಮಾದೇಶ್​, ವೆಂಕಟೇಶ್​, ಮಂಜುನಾಥ್​, ರವಿ ಇತರರಿದ್ದರು. 
ಜಿಲ್ಲೆ

ಮಳೆಗೂ ಜಗ್ಗದ ಹೋರಾಟಗಾರರು

ಸರ್ಜಾಪುರ : ಆನೇಕಲ್​ ತಾಲೂಕು ಸರ್ಜಾಪುರ ಹೋಬಳಿ ವ್ಯಾಪ್ತಿಯಲ್ಲಿ ಭೂಸ್ವಾಧಿನ ವಿರೋಧಿಸಿ ಹಂದೇನಹಳ್ಳಿಯಲ್ಲಿ ಕೈಗೊಂಡಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ 28ನೇ ದಿನ ಪೂರೈಸಿತು. ಹೋರಾಟ ತೀವ್ರಗೊಂಡಿದ್ದು, ರೈತರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮಂಗಳವಾರ ಹೋರಾಟಕ್ಕೆ ರೈತರು, ವಿವಿಧ ಸಂಟನೆಗಳು ಸಾಥ್​ ನೀಡಿದ್ದವು.

ಸುಮಾರು 2 ಗಂಟೆಗಳ ಕಾಲ ಮಳೆ ಸುರಿದರೂ ರೈತರು ವೇದಿಕೆ ಬಿಟ್ಟು ಕದಲಲಿಲ್ಲ. ಬದಲಿಗೆ ವೇದಿಕೆ ಮುಂಭಾಗದಲ್ಲಿ ಹಾಕಿದ್ದ ಖುರ್ಚಿಗಳು, ಟವಲ್​ಗಳು ಛತ್ರಿಗಳ ಆಶ್ರಯ ಪಡೆದು ಮಳೆ ನಡುವೆ ಹೋರಾಟ ಮುಂದುವರಿಸಿದರು. ಶಾಮಿಯಾನ ಕೆಳಗೆ ಮಳೆ ನೀರು ಸೋರುತ್ತಿದ್ದರೂ ಕಿಚ್ಚು ತಣ್ಣಗಾಗಲಿಲ್ಲ. ರೈತರೆಲ್ಲರೂ ಒಗ್ಗಟ್ಟಿನ ಜಪ ಮಾಡಿ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದರು.

28ನೇ ದಿನದ ಸತ್ಯಾಗ್ರಹದಲ್ಲಿ ಕರ್ನಾಟಕ ಜೈ ಭೀಮ್​ ಜನ ಜಾಗೃತಿ ಸಂಟನೆ, ಕನ್ನಡ ಜಾಗೃತಿ ವೇದಿಕೆ, ವಿಮುಕ್ತಿ ಚಿರತೆಗಳ ಪಕ್ಷ, ಸಿಪಿಎಂ, ಸಿಪಿಐ, ಕನ್ನಡ ಪರ, ದಲಿತ ಮತ್ತು ಕಾರ್ಮಿಕ ಸಂಟನೆಗಳು ಭಾಗಿಯಾಗಿ ಬೆಂಬಲ ಸೂಚಿಸಿದವು. ದೇವನಹಳ್ಳಿ ರೈತರ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರವನ್ನೇ ಆನೇಕಲ್​ ತಾಲೂಕಿನ ವಿಷಯದಲ್ಲೂ ಸರ್ಕಾರ ತೆಗೆದುಕೊಳ್ಳಬೇಕು ಎಂದು ಶಾಸಕ ಬಿ.ಶಿವಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಹೋರಾಟಗಾರರು ಒತ್ತಾಯ ಮಾಡಿದರು. ಸರ್ಕಾರಗಳು ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯುತ್ತಿದ್ದವು. ಆದರೆ 1991ರ ನಂತರ ಬಂಡವಾಳ ಶಾಹಿಗಳನ್ನು ಈ ದೇಶದ ಬೆನ್ನೆಲುಬು ಎಂದು ಕರೆಯುತ್ತಿದ್ದಾರೆ.

ಅದಾನಿ, ಅಂಬಾನಿ, ಟಾಟಾ, ಬಿರ್ಲಾ, ಅಜೀಮ್​ ಪ್ರೇಮ್​ಜಿ, ನಾರಾಯಣ ಮೂರ್ತಿ ಇಂಥವರು ಮಾತ್ರ ಈ ದೇಶದ ಅಭಿವೃದ್ಧಿಗೆ ಕಾರಣವೇ ಹೊರತೂ ರೈತರು ಮತ್ತು ಕೂಲಿ ಕಾರ್ಮಿಕರು ಅಲ್ಲ ಎಂದು ಸರ್ಕಾರಗಳು ಬಹಿರಂಗವಾಗಿ ಹೇಳಿಕೆ ನೀಡುತ್ತಿವೆ. ಯಾವ ಬಂಡವಾಳಶಾಹಿಯೂ ದೇಶವನ್ನು ಅಭಿವೃದ್ಧಿ ಮಾಡಿಲ್ಲ. ಬದಲಾಗಿ ನಮ್ಮ ದೇಶವನ್ನು ದಿವಾಳಿ ಮಾಡಿದ್ದಾರೆ ಎಂದು ರೈತ ಮುಖಂಡ ಯಶವಂತ್​ ಆಕ್ರೋಶ ಹೊರಹಾಕಿದರು. ಆನೇಕಲ್​ ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿಯ ರಾಮಸ್ವಾಮಿ ರೆಡ್ಡಿ, ಚಂದ್ರರೆಡ್ಡಿ, ವಿಶ್ವನಾಥ್​ ರೆಡ್ಡಿ, ಎಸ್​.ವಿ.ಟಿ ಮಂಜುನಾಥ್​ ರೆಡ್ಡಿ, ದೇವರಾಜು, ಜಯಪ್ರಕಾಶ್​, ಮಧುಸೂಧನ್​ ರೆಡ್ಡಿ, ಉಮಾ ಪರಶುರಾಮ್​ ಹಾಜರಿದ್ದರು,

ಭೂಮಿ ಕಿತ್ತುಕೊಳ್ಳುವ ಕಾಲ ಈಗಿಲ್ಲ : ಲಾಠಿ ಏಟು ನೀಡಿ, ಗುಂಡು ಹೊಡೆದು ನಮ್ಮ ಭೂಮಿ ಕಿತ್ತುಕೊಳ್ಳುವ ಕಾಲ ಹೊರಟುಹೋಗಿದೆ. ರೈತರಲ್ಲಿ ಒಡಕು ಸೃಷ್ಟಿ ಮಾಡಿ ನಮ್ಮ ಭೂಮಿಗಳನ್ನು ಕಿತ್ತುಕೊಳ್ಳುವ ಹುನ್ನಾರಗಳು ಪ್ರಾರಂಭವಾಗಿವೆೆ. ಅದನ್ನು ಅರ್ಥೈಸಿಕೊಂಡು ಒಗ್ಗಟ್ಟಿನಿಂದ ಹೋರಾಡಬೇಕು. ಇಂದು ನಾವು ಭೂಮಿ ಕಳೆದುಕೊಂಡಲ್ಲಿ ಮುಂದಿನ ಯಾವ ತಲೆಮಾರಿಗೂ ಕೃಷಿ ಭೂಮಿ ಇಲ್ಲದಂತಾಗಲಿದೆ ಎಂದು ಮುಖಂಡ ಯಶವಂತ್​ ಎಚ್ಚರಿಕೆ ನೀಡಿದರು. ಭೂಸ್ವಾಧಿನದ ಹಿಂದೆ ಇರುವುದು ಯಾವ ಅಭಿವೃದ್ಧಿಯ ಚಿಂತನೆಯೂ ಅಲ್ಲ, ಕೈಗಾರಿಕೆಯೂ ಇಲ್ಲ. ಇರುವುದು ರಾಜಕಾರಣಿಗಳನ್ನು ಪೋಷಣೆ ಮಾಡುತ್ತಿರುವ ಬಂಡವಾಳ ಶಾಹಿಗಳ ಹಿತಾಸಕ್ತಿ ಮಾತ್ರ ಎಂದರು.

ವಿಧಾನಸೌಧದಲ್ಲಿ ರಿಯಲ್​ ಎಸ್ಟೇಟ್​ ಮಾಫಿಯಾದ ಶಾಸಕರು ತುಂಬಿ ತುಳುಕುತ್ತಿದ್ದಾರೆ. ಕರ್ನಾಟಕವು ಅತಿ ಹೆಚ್ಚು ಶ್ರೀಮಂತ ಶಾಸಕರನ್ನು ಹೊಂದಿರುವ ರಾಜ್ಯವಾಗಿದೆ ಎಂಬ ಕುಖ್ಯಾತಿಯನ್ನು ಗಳಿಸಿದೆ. ಇದು ಸಂತಸದ ವಿಷಯವಲ್ಲ, ಈ ಹಣವೆಲ್ಲ ರೈತರನ್ನು ದಿವಾಳಿ ಮಾಡಿ ಗಳಿಸಿರುವಂತಹ ಹಣವಾಗಿದೆ. > ಯಶವಂತ್​ ರೈತ ಸಂ ಮತ್ತು ಸಂಯುಕ್ತ ಹೋರಾಟ ಸಮಿತಿ ಮುಖಂಡ