ಸಿ.ಗಿರೀಶ್ 
ಜಿಲ್ಲೆ

ತೆರಿಗೆ ಹಣ ದುರುಪಯೋಗ ತಡೆಯದಿದ್ದರೆ ಹೋರಾಟ

ಅರಸೀಕೆರೆ: ನಗರಸಭೆ ಅಧಿಕಾರಿಗಳು ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ತಡೆಗೆ ಮುಂದಾಗದಿದ್ದರೆ ಬೀದಿಗಿಳಿದು ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್ ಎಚ್ಚರಿಕೆ ನೀಡಿದರು.

ಭೈರನಾಯಕನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಧ್ಯಕ್ಷ ಸಮೀವುಲ್ಲಾ ಹಾಗೂ ಮತ್ತವರ ಕುಟುಂಬ ಸದಸ್ಯರು ಹದಿನಾಲ್ಕು ಎಕರೆ ಜಮೀನು ಖರೀದಿ ಮಾಡಿದ್ದು ತಮಗೆ ಅನುಕೂಲಗುವಂತೆ 25 ಲಕ್ಷ ರೂ.ವೆಚ್ಚದಲ್ಲಿ ಬೀದಿದೀಪ ಅಳವಡಿಸಲು ನಗರಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಇದು ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ. ನಗರದ ಆಯಕಟ್ಟಿನ ಪ್ರದೇಶದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆ ಜನರನ್ನು ಕಾಡುತ್ತಿವೆ. ಇಂತಹ ಸಮಯದಲ್ಲಿ ಬೇಡದ ಜಾಗಕ್ಕೆ ಜನರ ತೆರಿಗೆ ಹಣ ವಿನಿಯೋಗಿಸಲು ಹೊರಟಿರುವುದು ಅಕ್ಷಮ್ಯ ಎಂದು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ದೂರಿದರು.

ಪಕ್ಷೇತರ ಸದಸ್ಯ ಇಮ್ರಾನ್ ಖಾನ್ ಮಾತನಾಡಿ, ಇಂದಿರಾ ನಗರ, ಶಾಂತಪ್ಪ ಲೇಔಟ್, ಚೌಡೇಶ್ವರಿ ನಗರದಲ್ಲಿ ಜನರು ಕತ್ತಲೆಯಲ್ಲಿ ಬದುಕು ಕಳೆಯುವಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಪೌರಾಯುಕ್ತರು ಅನ್ಯಜಾಗಕ್ಕೆ ಅನುದಾನ ವಿನಿಯೋಗಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯೆ ಪ್ರವೇಶಿಸಿ ಅನುದಾನ ದುರುಪಯೋಗ ತಡೆಯಬೇಕು. ಇಲ್ಲದಿದ್ದಲ್ಲಿ ಭೈರನಾಯಕನಹಳ್ಳಿ ತೋಟದಲ್ಲಿ ಧರಣಿ ಕೂರಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಹತ್ತು ಹೊಸ ಬಡಾವಣೆಗಳ ನಿರ್ಮಾಣ ಮಾಡುವಲ್ಲಿ ಲೋಪವಾಗಿದೆ ಎನ್ನುವ ಆರೋಪ ನಿಜವಾಗಿದೆ. ಚರಂಡಿ, ರಸ್ತೆ, ಉದ್ಯಾನವನ ಸರಿಪಡಿಸಿ ಎಂದು ಪೌರಾಯುಕ್ತರು ಮಾಲೀಕರಿಗೆ ನೋಟಿಸ್ ಕೊಟ್ಟಿದ್ದಾರೆ. ಪ್ರಕರಣ ಲೋಕಾಯುಕ್ತದಲ್ಲಿ ದಾಖಲಾಗಿದ್ದರೂ ಖಾತೆ ಬಿಡುಗಡೆ ಮಾಡಲು ಹುನ್ನಾರ ನಡೆದಿದೆ. ಕಾನೂನು ಹೋರಾಟದಲ್ಲಿ ಸತ್ಯಕ್ಕೆ ಜಯ ಲಭಿಸಲಿದೆ. ಮಾರುತಿ ನಗರದ ದೇಗುಲದ ಆವರಣದಲ್ಲಿ ಸಮುದಾಯ ಭವನದ ವಿದ್ಯುತ್ ಕಾಮಗಾರಿಗೆ ಮೂರು ಲಕ್ಷ ರೂ.ಅನುದಾನ ಕೇಳಿದರೆ ಬಂದು ಕೇಳದಿದ್ದರೆ ಕೊಡಲು ಸಾಧ್ಯವಿಲ್ಲ ಎನ್ನುವ ಉತ್ತರ ನಗರಸಭೆ ಅಧ್ಯಕ್ಷ ಸಮೀವುಲ್ಲಾ ಅವರಿಂದ ಬಂದಿದೆ. ರಾಜಕಾರಣದಲ್ಲಿ ನಮಗೂ ಸಮಯ ಬಂದೇ ಬರುತ್ತದೆ ಎಂದು ಜೆಡಿಎಸ್ ಮುಖಂಡ ರಮೇಶ್ ಕಿಡಿಕಾರಿದರು.

ನಗರ ಯೋಜನಾ ಪ್ರಾಧಿಕಾರದ ಸದಸ್ಯ ಶಿವನ್‌ರಾಜ್ ಮಾತನಾಡಿ, ಆರನೇ ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗೆ ವಿನಾಕಾರಣ ಅಡ್ಡಿ ಮಾಡಲಾಗಿದೆ. ಹೈಮಾಸ್ಟ್, ಸಿಸಿ ರಸ್ತೆ ಒಳಗೊಂಡಂತೆ ಯಾವುದೇ ಕೆಲಸ ಕೈಗೆತ್ತಿಕೊಂಡಿಲ್ಲ.ಇವರ ದಲಿತ ವಿರೋಧಿ ನೀತಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದರು. ಮುಖಂಡ ಹರ್ಷವರ್ಧನ್‌ರಾಜ್ ಸುದ್ದಿಗೋಷ್ಠಿಯಲ್ಲಿದ್ದರು.