ಜಿಲ್ಲೆ

ಸೌಲಭ್ಯ ನೀಡದಿದ್ದರೆ ಹೋರಾಟ

ಗಂಗಾಧರ ಬಿ ವಿ
ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂದ ಅಧ್ಯಕ್ಷ ಜಿ.ಹನುಮಂತಪ್ಪ ಹೇಳಿಕೆ ರಾಮನಗರ ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಬಗೆಯ ಸೌಲಭ್ಯಗಳನ್ನೂ ಅನುದಾನಿತ ಶಾಲಾ-&ಕಾಲೇಜುಗಳ ನೌಕರರಿಗೂ ನೀಡಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಶಾಲಾ-& ಕಾಲೇಜುಗಳನ್ನು ಬಂದ್​ ಮಾಡಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಕರ್ನಾಟಕ ಅನುದಾನಿತ ಶಾಲಾ&-ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಹೇಳಿದರು. ನಗರದ ಭಾರತೀಯ ಸಂಸತಿ ವಿದ್ಯಾಪಿಠ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅನುದಾನಿತ ಶಾಲಾ-&ಕಾಲೇಜುಗಳ ನೌಕರರ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದರು. ಹಳೆ ಪಿಂಚಣಿ ಯೋಜನೆ ಜಾರಿಯಲ್ಲಿದ್ದಾಗ ಸರ್ಕಾರಿ ನೌಕರರಿಗೆ ದೊರಕುತ್ತಿದ್ದ ಎಲ್ಲ ಸೌಲಭ್ಯಗಳೂ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಲಭ್ಯವಾಗುತ್ತಿದ್ದವು. ಆದರೆ, ನೂತನ ಪಿಂಚಣಿ ಯೋಜನೆಯಲ್ಲಿ ಅನುದಾನಿತ ನೌಕರರಿಗೆ ಪಿಂಚಣಿ ಕಡಿತಗೊಳಿಸುವ ಮೂಲಕ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆಯೂ ಇಲ್ಲ. ಹೊಸ ಪಿಂಚಣಿ ಯೋಜನೆಯೂ ಇಲ್ಲದಂತಾಗಿದೆ. ಸರ್ಕಾರಿ ಹಾಗೂ ಅನುದಾನಿತ ನೌಕರರು ಸಮಾನ ಕೆಲಸ ಮಾಡುತ್ತಿದ್ದರೂ ಎರಡೂ ಬಗೆಯ ಪಿಂಚಣಿ ಯೋಜನೆಯಿಂದ ಅನುದಾನಿತ ನೌಕರರನ್ನು ಹೊರಗುಳಿಸಿ ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಕೊಡದೆ ವಂಚಿಸುತ್ತಿರುವುದು ಆಧುನಿಕ ಶೋಷಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 25-30 ವರ್ಷ ಸೇವೆ ಮಾಡಿದ ನೌಕರರಿಗೆ ನಿವೃತ್ತಿ ನಂತರ ಬಿಡಿಗಾಸನ್ನೂ ಕೊಡದೆ ಬರಿಗೈಯಲ್ಲಿ ಹೊರದೂಡಿದರೆ ಅವರ ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಅಂತಿಮ ದಿನಗಳಲ್ಲಿ ವಯಸ್ಸಹಜ ಕಾಯಿಲೆಗಳ ಚಿಕಿತ್ಸೆಗೂ ಅನ್ಯರ ಮೇಲೆ ಅವಲಂಬಿತರಾಗುವಂತಾಗಿದೆ. ಜತೆಗೆ ಕುಟುಂಬದ ಸದಸ್ಯರೂ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗುತ್ತಿದ್ದಾರೆ. ಜೀವನ ನಿರ್ವಹಣೆಗೆ ಹಣವಿಲ್ಲದೆ ಹತಾಶೆಗೊಳಗಾಗಿ ಅದೆಷ್ಟೋ ಮಂದಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದರು. ಕಾನೂನು ಹೋರಾಟ ಸಮಿತಿ ಅಧ್ಯಕ್ಷ ಬುಕ್ಕಾಂಬುದಿ ನಾಗರಾಜಪ್ಪ ಮಾತನಾಡಿ, ಸಂವಿಧಾನ 34 ಡಿ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂದಿದೆ. ಹಿಂದೆ ಸೇವೆಯಲ್ಲಿದ್ದ ನೌಕರರಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನೂ ಕೊಟ್ಟಿದೆ. 1983 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಡೋದು ಸರ್ಕಾರದ ವಿವೇಚನಾಧಿಕಾರ. ಅದರಂತೆ ಎಸ್​ಸಿ/ಎಸ್​ಟಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಟ್ಟರು. ತದನಂತರ ಎಚ್​.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್​.ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಇತರೆ ವರ್ಗಗಳ ಶಿಕ್ಷಣ ಸಂಸ್ಥೆಗಳಿಗೂ ಅನುದಾನ ಕೊಟ್ಟರು ಎಂದರು. ​ ಅಧಿಕಾರಿಗಳೇ ವಿರೋಧಿಗಳುಸಂಚಾಲಕ ಜಾಲಮಂಗಲ ನಾಗರಾಜು ಮಾತನಾಡಿ, ಪಿಂಚಣಿ ನೀಡುವ ವಿಷಯದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಇದೆ. ಆದರೆ, ಅಧಿಕಾರಿಗಳು ಸಾವಿರಾರು ಕೋಟಿ ಹಣ ಬೇಕಾಗುತ್ತದೆ ಎಂದು ಸಬೂಬು ಹೇಳಿ ಜನಪ್ರತಿನಿಧಿಗಳ ದಾರಿ ತಪ್ಪಿಸುತ್ತಿದ್ದಾರೆ. ರಾಜಕಾರಣಿಗಳಿಗಿಂತ ಅಧಿಕಾರಿಗಳೇ ಪಿಂಚಣಿ ಜಾರಿಗೆ ವಿರೋಧ ಮಾಡುತ್ತಿದ್ದಾರೆ. ನಿವೃತ್ತರಾಗಿ ನಿಧನ ಹೊಂದಿರುವವರು, ಜೀವಂತವಾಗಿರುವವರು ಹಾಗೂ ಉದ್ಯೋಗದಲ್ಲಿರುವ ಅನುದಾನಿತ ನೌಕರರ ಕರಾರುವಕ್ಕಾದ ಪಟ್ಟಿಯನ್ನು ತಯಾರಿಸಿ, ಇವರಿಗೆ ಪಿಂಚಣಿ ನೀಡಲು ಎಷ್ಟು ಹಣ ಬೇಕು ಎಂಬ ಅಂಕಿ&-ಅಂಶಗಳನ್ನು ಸರ್ಕಾರಕ್ಕೆ ಒದಗಿಸಿಕೊಟ್ಟು ಪಿಂಚಣಿ ಸೌಲಭ್ಯ ನೀಡುವಲ್ಲಿ ವಿಧಾನ ಪರಿಷತ್​ ಸದಸ್ಯರು ಮತ್ತು ಶಿಕ್ಷಣ ಸಚಿವರು ಮುಂದಾಗಬೇಕು ಎಂದು ಮನವಿ ಮಾಡಿದರು.ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಅನುದಾನಿತ ನೌಕರರ ಸಭೆ ನಡೆಸಿ ನೌಕರರ ಅಂಕಿ-&ಅಂಶಗಳನ್ನು ಸಂಗ್ರಹಿಸಲಾಗುತ್ತಿದ್ದು, ಮುಂದಿನ ತಿಂಗಳ ವೇಳೆಗೆ ಹಣ ಎಷ್ಟು ಬೇಕೆನ್ನುವ ಬಗ್ಗೆ ಕರಾರುವಕ್ಕಾದ ಅಂಕಿ-&ಅಂಶಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಅರಸೇಗೌಡ, ಎಂ.ಸಿ.ಗೋವಿಂದರಾಜು, ಸಿದ್ದರಾಜು, ಸುನೀಲ್​ಕುಮಾರ್​, ಜಯರಾಮೇಗೌಡ, ವೇಣುಗೋಪಾಲ, ಚಂದ್ರಯ್ಯ, ಚಂದ್ರೇಗೌಡ, ರವಿಕುಮಾರ್​, ರಫತ್​ ಜಬೀನ್​, ಕೃಷ್ಣಯ್ಯ, ಅಶೋಕ್​, ಹಿತ್ತಲಮನಿ, ಮಲ್ಲಿಕಾರ್ಜುನಯ್ಯ, ರಾಘವೇಂದ್ರ ನಾಯಕ್​ ಇತರರು ಇದ್ದರು.