ಜಿಲ್ಲೆ

ತಾಯಿ-ಮಗು ಆರೈಕೆ ಕೇಂದ್ರ, ಹೆರಿಗೆ ಆಸ್ಪತ್ರೆಗಾಗಿ ಹೋರಾಟ ನಾಳೆ

ತಿ.ನರಸೀಪುರ: ತಾಲೂಕು ಕೇಂದ್ರವಾಗಿರುವ ತಿ.ನರಸೀಪುರ ಪಟ್ಟಣದಲ್ಲಿ ತಾಯಿ-ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಮಾ.4ರಂದು ಜಾಥಾ, ಸಹಿ ಸಂಗ್ರಹ ಆಂದೋಲನ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷೆ ಮೋಹನ್ ಕುಮಾರಿ ಹೇಳಿದರು.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಭಾನುವಾರ ಪ್ರತಿಭಟನೆಯ ಪೂರ್ವಭಾವಿಯಾಗಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯಪೂರ್ಣ ಸಮಾಜಕ್ಕಾಗಿ-ಆರೋಗ್ಯವಂತ ಮಗು ಧ್ಯೇಯ ವಾಕ್ಯದೊಂದಿಗೆ ತಾಲೂಕಿನಲ್ಲೊಂದು ಸುಸಜ್ಜಿತವಾದ ತಾಯಿ, ಮಗು ಆರೈಕೆ ಮತ್ತು ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲು ಬೆಳಗ್ಗೆ 10.30ಗಂಟೆಗೆ ತಹಸೀಲ್ದಾರ್ ಕಚೇರಿಯಿಂದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯವರೆಗೆ ಬೃಹತ್ ಜಾತಾ ಮತ್ತು ಸಹಿ ಸಂಗ್ರಹ ಆಂದೋಲನವನ್ನು ಆಯೋಜಿಸಲಾಗಿದೆ ಎಂದರು.

ಹೋರಾಟ ಸಮಿತಿಯ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ರಾಜ್ಯದ ಆಡಳಿತಾರೂಢ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರಾಗಿ ಪ್ರತಿನಿಧಿಸುವ ನರಸೀಪುರ ತಾಲೂಕು ಕೇಂದ್ರದಲ್ಲಿ ತಾಯಿ, ಮಗು ಆರೈಕೆ ಹಾಗೂ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಲೇಬೇಕು. ಅದಕ್ಕಾಗಿ ಈಗಿನ ಬಜೆಟ್‌ನಲ್ಲಿ ಅನುದಾನವನ್ನು ಕಾಯ್ದಿರಿಸಬೇಕು. ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ಬೃಹತ್ ಜಾತಾ ಮತ್ತು ಸಹಿ ಸಂಗ್ರಹ ಆಂದೋಲನದ ಹೋರಾಟದ ಹೆಜ್ಜೆಯನ್ನಿಡುತ್ತಿದ್ದೇವೆ. ಜನಸಮುದಾಯಕ್ಕೆ ಅತ್ಯಗತ್ಯವಾಗಿರುವ ನಮ್ಮ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ ಎಂದರು.

ಹೋರಾಟದ ರೂಪುರೇಷೆಯ ಬಗ್ಗೆ ಸಮಿತಿಯ ಉಪಾಧ್ಯಕ್ಷರಾದ ಕೋಮಲಾಕ್ಷಿ ನಾಗರಾಜ್ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ರೇಖಾ, ಸಂಚಾಲಕ ಸುರೇಶ್, ಮಣಿಲಾ, ಮಹದೇವಮ್ಮ, ಚಂದ್ರಮಯ್ಯ, ರೋಜಾ, ಶ್ವೇತಾ, ಆಶಾ, ಚೌಡಮ್ಮ, ನೇತ್ರಾವತಿ, ದಿವ್ಯಾ, ಹೊನ್ನಮ್ಮ, ನಿಂಗಮ್ಮಣ್ಣಿ, ಗೌರಮ್ಮ , ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಯಾಚೇನಹಳ್ಳಿ ಸೋಮಶೇಖರ್, ಕುಕ್ಕೂರು ರಾಜು, ಮುಖಂಡರಾದ ಸುರೇಶ್, ಕಿರಗಸೂರು ರಜನಿ, ಬನ್ನಹಳ್ಳಿಹುಂಡಿ ಉಮೇಶ್, ಬಿಲಿಗೆರೆಹುಂಡಿ ಶಿವಕುಮಾರ್, ಶಾಂತಕುಮಾರ್ ಇತರರು ಇದ್ದರು.