ಹುಣಸೂರು: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಮಿಕರ ಸಂಘಟನೆಗಳಿಂದ ಮೆರವಣಿಗೆ ನಡೆಯಿತು.
ಬುಧವಾರ ನಗರದ ಸಂವಿಧಾನ ವೃತ್ತದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಸಿಐಟಿಯು ಜಿಂದಾಬಾದ್, ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಬೇಡವೇ ಬೇಡ, ವಿಶ್ವ ಕಾರ್ಮಿಕರು ಒಂದಾಗಿ, ಹೋರಾಟಕ್ಕೆ ಮುಂದಾಗಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಸಿಐಟಿಯು ತಾಲೂಕು ಸಂಚಾಲಕ ವಿ.ಬಸವರಾಜು ಕಲ್ಕುಣಿಕೆ ಮಾತನಾಡಿ, ಮೇ ದಿನವನ್ನು ದೇಶ, ಭಾಷೆ, ಧರ್ಮಗಳ ಗಡಿ ಮೀರಿ ಆಚರಿಸಲಾಗುತ್ತಿದೆ. ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕನ ಬೆವರಿನ ಪಾಲನ್ನು ಕಸಿಯುವ ಯತ್ನವನ್ನು ಕೇಂದ್ರ ಸರ್ಕಾರ ಮಾಡಲು ಮುಂದಾಗುತ್ತಿದೆ. ಕಾರ್ಮಿಕರು ತ್ಯಾಗ, ಬಲಿದಾನದಿಂದ ಪಡೆದ ಹಕ್ಕುಗಳನ್ನು ಈಗಾಗಲೇ ಬದಲಾಯಿಸಿ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಕಾರ್ಮಿಕರನ್ನು ಮತ್ತೆ ಗುಲಾಮಗಿರಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದು ಹೇಳಿದರು.
ಅಂಗನವಾಡಿ ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ಪುಷ್ಪಲತಾ ಮಾತನಾಡಿ, ಇಂದಿನ ದಿನಗಳಲ್ಲಿ ಕಾರ್ಮಿಕರಿಗೆ ಕೆಲಸ ಕಾಯಂ ಇಲ್ಲದಂತಾಗಿದೆ. ಸರ್ಕಾರದ ಯೋಜನೆಗಳನ್ನು ಅಭದ್ರತೆಗೊಳಿಸುವ ಕೆಲಸ ನಡೆಯುತ್ತಿದೆ. ಕಾರ್ಮಿಕರ ಮೇಲೆ ದೌರ್ಜನ್ಯ ದಬ್ಬಾಳಿಕೆ ಹೆಚ್ಚಾಗಲು ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳೇ ಕಾರಣ. ಹಾಗಾಗಿ ಎಲ್ಲಾ ಕಾರ್ಮಿಕರು ಒಗ್ಗಟ್ಟಾಗಿ ಹೋರಾಡಬೇಕಾದ ಅನಿರ್ವಾಯತೆಯಿದೆ ಎಂದರು.
ಸಿಐಟಿಯು ಸಹ ಸಂಚಾಲಕ ಶಿವರಾಮು, ಅಂಗನವಾಡಿ ನೌಕರ ಸಂಘದ ಮಂಗಳಗೌರಮ್ಮ, ಶಾರದಾ, ಪೂರ್ಣಿಮಾ, ಕಲಾವತಿ, ನಗರ ಕಾರ್ಮಿಕ ಸಂಘದ ಮುಖಂಡರಾದ ಮಹಾದೇವ, ಜಲೇಂದ್ರ, ಕುಮಾರ, ಡಿ.ಕೆ. ಕೃಷ್ಣಕುಮಾರ, ಕಟ್ಟಡ ಕಾರ್ಮಿಕ ಸಂಘದ ರೆಡ್ಡಿಕೊಪ್ಪಲು ನಟರಾಜು, ಶ್ರೀನಿವಾಸ್, ಪುಟ್ಟಶೆಟ್ಟಿ, ಬಿಸಿಯೂಟ ನೌಕರರ ಸಂಘದ ಮಂಜುಳಾ, ಶಾಂತಮ್ಮ, ಸುಶೀಲಾ, ವಿಮಾ ಪ್ರತಿನಿಧಿಗಳ ಸಂಘದ ವೀರಭದ್ರ, ಮುಖಂಡ ನಾಗನಹಳ್ಳಿ ಚೆಲುವರಾಜು, ಅಂಗನವಾಡಿ ನೌಕರರು, ಕಟ್ಟಡ ಕಾರ್ಮಿಕರು, ಬಿಸಿಯೂಟ ನೌಕರರು ಭಾಗವಹಿಸಿದ್ದರು.