ಮುಧೋಳದಲ್ಲಿ ಹಿಂದು ಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು. ಮುಖಂಡ ಹನುಮಂತ ಮಳಲಿ, ಶ್ರೀಶೈಲಗೌಡ ಪಾಟೀಲ, ಸುನೀಲ ಕಂಬೋಗಿ, ಅನಂತರಾವ್ ಘೋರ್ಪಡೆ, ಬಸವರಾಜ ಮಹಾಲಿಂಗೇಶ್ವರಮಠ, ಗುರುಪಾದ ಕುಳಲಿ , ಮಹಾಲಿಂಗ ಗುಂಜಿಗಾಂವಿ ಇತರರು ಇದ್ದರು. 
ಜಿಲ್ಲೆ

ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಅನ್ಯಾಯದ ಏಟಿಗೆ ಎದಿರೇಟು ನೀಡಲು ನಾವೆಲ್ಲರೂ ಸಂಘಟಿತರಾಗಿ ತಕ್ಕ ಉತ್ತರ ನೀಡಬೇಕು ಎಂದು ಹಿಂದು ಮುಖಂಡ, ನಾಟಿ ವೈದ್ಯ ಹನುಮಂತ ಮಳಲಿ ಹೇಳಿದರು.

ಇತ್ತೀಚೆಗೆ ನಗರದ ಜನತಾರಾಜ್ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ದೂರು ದಾಖಲು ಹಾಗೂ ನಗರದ ಆರು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಮುಧೋಳ ಹಿಂದು ಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಡಿವೈಎಸ್‌ಪಿ ಈ. ಶಾಂತವೀರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಬಾಲಕಿ ಮೇಲೆ ನಡೆದ ಅತ್ಯಾಚಾರ ಘಟನೆ ಖಂಡನಾರ್ಹವಾದುದು. ಇದು ಕೇವಲ ಮುಧೋಳ ಜನತೆಗೆ ಮಾತ್ರವಲ್ಲ, ಸಮಸ್ತ ಹಿಂದುಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಈ ಹಿಂದೆ ರಾಜ್ಯದಲ್ಲಿ ಸಾಕಷ್ಟು ಘಟನೆಗಳು ನಡೆದರೂ ಅವುಗಳಿಗೆ ನ್ಯಾಯ ಸಿಕ್ಕಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗಬೇಕಾದರೆ ಪೊಲೀಸ್ ಅಧಿಕಾರಿಗಳು ಮುಂದಾಗಬೇಕು. ಯಾರ ಅಪ್ಪಣೆಗೆ ಕಾಯದೆ ಕಾನೂನು ಪ್ರಕಾರ ಆಗಬೇಕಾದ ಶಿಕ್ಷೆಯನ್ನು ನೀಡಿ ಮುಂದೆ ಈ ರೀತಿ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ನೀಡಬೇಕು. ಇದಕ್ಕಾಗಿ ಎಲ್ಲ ಹಿಂದುಗಳು ಸಂಘಟಿತ ಹೋರಾಟ ನಡೆಸಬೇಕು. ಹಿಂದುಗಳ ಮೇಲೆ ನಡೆಯುತ್ತಿರುವ ಅನ್ಯಾಯ ತಡೆಯಬೇಕಾದರೆ ಏಟಿಗೆ ಎದಿರೇಟು ನೀಡುವ ಹಾಗೆ ನಾವೆಲ್ಲರೂ ಸಂಘಟಿತರಾಗಿ ತಕ್ಕ ಉತ್ತರವನ್ನು ಕೊಡಬೇಕಾಗಿದೆ. ಔರಂಗಜೇಬನ ಬಗ್ಗೆ ಮಾತನಾಡಿದ ಶಾಸಕ ಬಸವರಾಜ ಪಾಟೀಲ ಯತ್ನಾಳ ಮೇಲೆ ಹಾಕಿದ ಪ್ರಕರಣವನ್ನು ತಕ್ಷಣ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಹಿಂದು ಸಂಘಟಕ, ಬಿಜೆಪಿ ಮುಖಂಡ ಶ್ರೀಶೈಲಗೌಡ ಪಾಟೀಲ ಮಾತನಾಡಿ, ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ನಾವೆಲ್ಲ ಹಿಂದು ಜನತೆ ಮುಂದಾಗಬೇಕು ಎಂದು ಹೇಳಿದರು.

ಸುನೀಲ ಕಂಬೋಗಿ ಮಾತನಾಡಿ, ಬಾಲಕಿ ಮೇಲೆ ಅತ್ಯಾಚಾರ ಮಾಡಿದವರಿಗೆ ಕೊಡುವ ಶಿಕ್ಷೆ ಹೇಗಿರಬೇಕೆಂದರೆ ಮುಂದೆ ಯಾರೂ ಈ ತರಹದ ದುಷ್ಕೃತ್ಯ ನಡೆಸದಂತೆ ಇರಬೇಕು. ಪೊಲೀಸರು ಈ ನಿಟ್ಟಿನಲ್ಲಿ ದುಷ್ಕರ್ಮಿಗಳಿಗೆ ಶಿಕ್ಷೆಗೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಅನಂತರಾವ್ ಘೋರ್ಪಡೆ, ಬಸವರಾಜ ಮಹಾಲಿಂಗೇಶ್ವರಮಠ, ಗುರುಪಾದ ಕುಳಲಿ , ಮಹಾಲಿಂಗ ಗುಂಜಿಗಾಂವಿ, ಸದಾ ಜಾಧವ, ಆನಂದ ಬನ್ನೂರ, ಬಸವರಾಜ ಗಣಿ, ಕಲ್ಮೇಶ ಗೋಸಾರ, ಪರಸು ನಿಗಡೆ, ರಾಜು ಯಡಹಳ್ಳಿ, ಕೃಷ್ಣ ಕಟ್ಟಿಮನಿ, ಕೇದಾರಿ ಕದಂ, ಮಲ್ಲು ಕಾಬಿ, ಶಿವು ಬೆಟಗೇರಿ, ಕಮಲಾ ಜೇಡರ, ಸುಮೇದಾ ಮಾನೆ, ವನಜಾಕ್ಷಿ ಮಂಟೂರ, ವಿಮಲಾ ಯಾದವ ಇದ್ದರು.