ಹುಕ್ಕೇರಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಕ್ಯಾರಗುಡ್ಡ ಬಳಿ ವಿದ್ಯಾನಗರಿ ಪ್ರಾರಂಭಿಸಲಾಗಿದೆ. ಇಲ್ಲಿ ಪದವಿಪೂರ್ವ ಹಂತದಿಂದ ಡಿಗ್ರಿ ಕಾಲೇಜಿನವರೆಗೆ ಹಾಗೂ ರಾಣಿ ಚನ್ನಮ್ಮ ವಸತಿ ಶಾಲೆ, ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಕನ್ನಡ ಸಂಸ್ಕೃತಿ ಭವನ ನಿರ್ಮಿಸಲಾಗುವುದು ಎಂದು ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆಯಡಿ 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪಿಯು ಕಾಲೇಜಿನ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿ ಅಗ್ನಿಶಾಮಕ ಕಾರ್ಯಾಲಯವಿದ್ದು, ಕೆಎಸ್‌ಆರ್‌ಟಿಸಿ ಬಸ್ ಡಿಪೋ ಕಾಮಗಾರಿ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಾಮಗಾರಿಗಳಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ನಂತರ 10.44 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಇಲಾಖೆಯ ಅನುದಾನದಡಿ ತಾಲೂಕಿನ ಹುಲ್ಲೋಳಿ, ಹುಲ್ಲೋಳಿ ಹಟ್ಟಿ, ನೇರಲಿ, ಕಮತನೂರ, ಗವನಾಳ ಸೊಲ್ಲಾಪೂರ, ಹರಗಾಪುರಗಡ, ಕೋಣನಕೇರಿ, ಮತ್ತಿವಾಡ, ಹಡಲಗಾ, ರಾಶಿಂಗ, ಶಿಪ್ಪೂರ, ಹಿಟ್ನಿ, ಕಣಗಲಾ, ಬಾಡ, ಬಾಡವಾಡಿ ಗ್ರಾಮಗಳಲ್ಲಿ ಜಗಜೀವನ ರಾಂ ಭವನ, ವಿದ್ಯಾರ್ಥಿಗಳ ವಸತಿ ನಿಲಯ, ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನಾಭಿವೃದ್ಧಿ ಮತ್ತು ಶಾಲಾ ಕೊಠಡಿಗಳು, ರಸ್ತೆ, ಎಸ್‌ಸಿ ಕಾಲನಿಗೆ ಮೂಲ ಸೌಕರ್ಯ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಬಿಜೆಪಿ ಮಂಡಲ ಮತ್ತು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ಮುಖಂಡರಾದ ಜಯಗೌಡ ಪಾಟೀಲ, ಮಹಾವೀರ ನಿಲಜಗಿ, ಗುರುರಾಜ ಕುಲಕರ್ಣಿ, ರಾಜು ಮುನ್ನೋಳಿ, ಪ್ರಶಾಂತ ಪಾಟೀಲ, ಬಸಗೌಡ ಪಾಟೀಲ, ವೀರೇಶ ಗಜಬರ, ಅಧಿಕಾರಿಗಳಾದ ಅಶೋಕ ಗುರಾಣಿ, ಪಿ.ಆರ್.ಕಾಮತ, ಉಮೇಶ ಸಿದ್ನಾಳ, ಪಿ.ಎಸ್.ಐ ಶಿವಾನಂದ ಗುಡಗನಟ್ಟಿ ಹಾಗೂ ಆಯಾ ಗ್ರಾಮಗಳ ಜನಪ್ರತಿನಿಧಿಗಳು, ಮುಖಂಡರಿದ್ದರು.