ಚನ್ನಗಿರಿ: ಶಾಲೆಗಳಲ್ಲಿ ಶಿಕ್ಷಕರಂತೆ ಶಾಲಾ ಅಭಿವೃದ್ಧಿ ಸಮಿತಿಯವರ ಜವಾಬ್ದಾರಿ ಅಧಿಕವಾಗಿರುತ್ತದೆ. ಯಾವ ಶಾಲೆಯಲ್ಲಿ ಉತ್ತಮ ಎಸ್ಡಿಎಂಸಿ ಇರುತ್ತದೋ ಅದು ಮಾದರಿಯಾಗಲು ಸಾಧ್ಯ ಎಂದು ಕ್ಷೇತ್ರ ಸಮಾನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ಸೋಮವಾರ 2024-25ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ಮೇಲುಸ್ತುವಾರಿ ಸಮಿತಿ ಶಾಲೆಗಳಿಗೆ ಪುಷ್ಠಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಸಮಗ್ರ ಶಿಕ್ಷಣದ ಆದೇಶದಂತೆ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ತಾಲೂಕಿನಲ್ಲಿ ಉತ್ತಮ ಸೇವೆ ಮಾಡಿದ ಚನ್ನಗಿರಿ, ಹರೋನಹಳ್ಳಿ, ಅಜ್ಜಿಹಳ್ಳಿ, ನಲ್ಲೂರು ಹಾಗೂ ಜೋಳದಾಳು ಶಾಲೆಗಳನ್ನು ಅಯ್ಕೆ ಮಾಡಲಾಗಿದೆ ಎಂದರು.
ಸಮಿತಿ ಸದಸ್ಯರಾದ ಶಾಲೆಯ ಬಗ್ಗೆ ಅಭಿಮಾನ ಇರುವಂತಹ ಪಾಲಕರು ಸ್ವಲ್ಪ ಸಮಯ ಮೀಸಲಿಟ್ಟು, ಶಾಲೆಗೆ ಬೇಕಾದ ಹೆಚ್ಚುವರಿ ಕೊಠಡಿ, ಕುಡಿಯುವ ನೀರು, ಶೌಚಗೃಹ ಸೇರಿ ಕೆಲಸಗಳಲ್ಲಿ ಭಾಗಿಯಾಗಿ ಸೇವೆ ಮಾಡುವ ಮೂಲಕ ತಾಲೂಕಿನಲ್ಲಿ ಶಾಲೆಯನ್ನು ಉಳಿಸುವ ಜತೆಗೆ ಗುರುತಿಸುವಂತೆ ಮಾಡಿದ್ದಾರೆ ಎಂದರು.
ಶಿಕ್ಷಣ ಇಲಾಖೆ ಸಾವಿರಾರು ಕೋಟಿ ಅನುದಾನವನ್ನು ಸರ್ಕಾರಿ ಶಾಲೆಗಳಿಗೆ ನೀಡುತ್ತಾ ಬಂದಿದೆ. ಪರಿಣತ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಾರೆ. ಆದರೆ ಪಾಲಕರು ಪ್ರತಿಷ್ಠೆಗಾಗಿ ಸಾವಿರಾರು ರೂಪಾಯಿ ನೀಡಿ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸುತ್ತಾರೆ. ಕಲಿಕಾ ಗುಣಮಟ್ಟ ಕಡಿಮೆ ಆಗಿದೆಯೆಂದು ನಂತರ ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವುದಲ್ಲದೆ, ಚೇತರಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದರು.
ಬಾಲಿಕಾ ಪ್ರೌಢಶಾಲೆ ಮುಖ್ಯಶಿಕ್ಷಕ ಬಸವರಾಜಪ್ಪ, ಚನ್ನಗಿರಿ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ್, ಜೋಳದಾಳು ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್, ಹರೋನಹಳ್ಳಿ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್, ಮುಖ್ಯ ಶಿಕ್ಷಕಿ ಭಾಗ್ಯವತಿ, ಚಂದ್ರನಾಯ್ಕ, ಮಂಜುನಾಥ್, ದೇವೇಂದ್ರ ನಾಯ್ಕ, ಬಿಆರ್ಪಿ ಜಮಾಲ್, ಇಸಿಓ ರಶ್ಮಿಹೆಗಡೆ ಇದ್ದರು.