ರಾಣೆಬೆನ್ನೂರ: ತಾಲೂಕಿನ ತುಂಗಭದ್ರಾ ನದಿಪಾತ್ರದ ಜಮೀನುಗಳನ್ನು ಹೊರತುಪಡಿಸಿ ಇನ್ನುಳಿದ ಬಹುಪಾಲು ಜಮೀನುಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬದು ಕಂದಕ (ಗುಂಡಿ) ನಿರ್ಮಾಣ ಮಾಡಲಾಗುತ್ತಿದೆ. ಇದು ರೈತರಿಗೆ ವರದಾನವಾಗಿದೆ.
ತಾಪಂ ಹಾಗೂ ಆಯಾ ಗ್ರಾಪಂ ವತಿಯಿಂದ ಕೈಗೊಳ್ಳುವ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಕೂಲಿ ಕಲ್ಪಿಸಲಾಗುತ್ತಿದ್ದು, ಬದು ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬರಗಾಲ ಹಾಗೂ ಕಳೆದ ವರ್ಷ ಅತಿವೃಷ್ಟಿ ಎದುರಾದ ಕಾರಣ ರೈತರು ಬದು ನಿರ್ವಿುಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಈ ಸಮಯದಲ್ಲಿ ರೈತರು ವೈಯಕ್ತಿಕವಾಗಿ ಕಾಮಗಾರಿ ಕೈಗೊಂಡರೂ ಕೂಲಿ ಹಣ ನೀಡಲು ಸಂಕಷ್ಟ ಎದುರಾಗಿತ್ತು. ಆದರೀಗ ನರೇಗಾದಡಿ ಕಾಮಗಾರಿ ಮಾಡುತ್ತಿರುವುದು ರೈತರಿಗೆ ಅನುಕೂಲವಾಗಿದೆ.
ಏನಿದು ಬದು ನಿರ್ಮಾಣ...?: ಜಮೀನಿನ ಕೊನೆಯಲ್ಲಿ ಮಳೆ ನೀರು ಇಂಗುವಂತೆ ಗುಂಡಿ ತೆಗೆಯುವುದು. ಗುಂಡಿ ತೆಗೆದ ಮಣ್ಣನ್ನು ಜಮೀನಿಗೆ ಬದುವನ್ನಾಗಿ ನಿರ್ವಿುಸಲಾಗುತ್ತದೆ. ಜಮೀನಿನ ಇಳಿಜಾರು ಪ್ರದೇಶದಲ್ಲಿ 2 ಅಡಿ ಆಳ, 5 ಮೀಟರ್ ಉದ್ದ ಹಾಗೂ 2 ಮೀಟರ್ ಅಗಲ ಗುಂಡಿಗಳನ್ನು ಸಾಲಾಗಿ ತೆಗೆಯಲಾಗುತ್ತದೆ.
ಬದು ನಿರ್ವಣದಿಂದ ಮಳೆಗಾಲದಲ್ಲಿ ನೀರು ಕಂದಕದಲ್ಲಿ ನಿಂತು ಜಮೀನಿನಲ್ಲೇ ಇಂಗುವಂತೆ ಮಾಡಲಾಗುತ್ತದೆ. ಇದರಿಂದ ಜಮೀನಿನಲ್ಲಿ ತೇವಾಂಶ ಹೆಚ್ಚುತ್ತದೆ. ಫಸಲಿಗೂ ಅನುಕೂಲವಾಗುವ ಜತೆಗೆ ಜಮೀನಿನಲ್ಲಿನ ಕೊಳವೆ ಬಾವಿಗಳಿಗೆ ಅಂತರ್ಜಲ ಮಟ್ಟ ಹೆಚ್ಚಿಸುತ್ತದೆ. ಮುಖ್ಯವಾಗಿ ಜಮೀನಿನಲ್ಲಿನ ಮಣ್ಣಿನ ಸವಕಳಿಯೂ ತಡೆಯುತ್ತದೆ. ರೈತರಿಗೆ ಇದು ಪೂರಕವಾಗಿರುವುದರಿಂದ ಯೋಜನೆಗೆ ಬಲ ಬಂದಿದೆ.
ಎಷ್ಟು ಕೆಲಸ...?: ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಈಗಾಗಲೇ 2300ಕ್ಕೂ ಅಧಿಕ ರೈತರ ಒಟ್ಟು 2500 ಹೆಕ್ಟೇರ್ ಜಮೀನಿನಲ್ಲಿ ಬದು ಕಂದಕ ನಿರ್ವಿುಸಲಾಗಿದೆ. ತಾಲೂಕಿನಲ್ಲಿ ಒಟ್ಟು 3266 ಕೂಲಿ ಕಾರ್ವಿುಕರು ಕೆಲಸ ಮಾಡುತ್ತಿದ್ದು, ಬದು ನಿರ್ಮಾಣ ಕಾಮಗಾರಿಯಲ್ಲಿ 22 ಸಾವಿರ ಮಾನವ ದಿನಗಳಾಗಿವೆ. ಪ್ರತಿ ದಿನಕ್ಕೆ 275 ರೂ.ದಂತೆ ಈಗಾಗಲೇ ಸಂಬಳ ನೀಡಲಾಗಿದೆ. ಈ ಯೋಜನೆ ಅಳವಡಿಸುವಲ್ಲಿ ರಾಣೆಬೆನ್ನೂರ ತಾಲೂಕು ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದೆ. ಸದ್ಯ ಕಾಮಗಾರಿ ನಡೆಯುತ್ತಿದ್ದು, ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಾಗ ಮಾತ್ರ ಸ್ವಲ್ಪ ಮುಂದಕ್ಕೆ ಹಾಕಲಾಗುತ್ತಿದೆ. ಇನ್ನುಳಿದಂತೆ ನಿತ್ಯವೂ ಕಾಮಗಾರಿ ನಡೆಯುತ್ತಿದೆ ಎಂದು ತಾಪಂ ಇಒ ಟಿ.ಆರ್. ಮಲ್ಲಾಡದ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಜಮೀನುಗಳಲ್ಲಿ ಬದು ಕಂದಕ ನಿರ್ಮಾಣ ಮಾಡುತ್ತಿರುವುದರಿಂದ ಮಳೆ ನೀರು ನಿಂತುಕೊಳ್ಳಲು ಅನುಕೂಲವಾಗಿದೆ. ಈ ಹಿಂದೆ ಜಮೀನಿನ ಮಣ್ಣು ಸಹ ಕೊಚ್ಚಿಕೊಂಡು ಹೋಗುತ್ತಿತ್ತು. ಇದೀಗ ಸಂಪೂರ್ಣ ಮಳೆಯಿಂದ ಜಮೀನು ಹಸಿಯಾಗಿದೆ. ಬೆಳೆಗಳಿಗೆ ತಂಪು ಆಗಲಿದೆ.| ಮಂಜಪ್ಪ ಎಸ್., ಮೈದೂರು ರೈತಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಮಳೆಗಾಲದಲ್ಲಿ ಆಗುವ ಅನುಕೂಲಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ. ರೈತರು ಉತ್ಸಾಹದಿಂದ ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಮಳೆ ಪೂರ್ಣ ಪ್ರಮಾಣದಲ್ಲಿ ಸುರಿಯುವವರೆಗೂ ಕಾಮಗಾರಿ ಮಾಡಲಾಗುವುದು.| ಟಿ.ಆರ್. ಮಲ್ಲಾಡದ, ತಾಪಂ ಇಒ ರಾಣೆಬೆನ್ನೂರ