ಮೈಸೂರು: ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಭ್ರೂಣ ಹತ್ಯೆತಡೆ ಕಾಯ್ದೆ ರಾಜ್ಯ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಬುಧವಾರ ನಗರಕ್ಕೆ ಭೇಟಿ ನೀಡಿದ್ದು, ಆರೋಗ್ಯ ಇಲಾಖೆಯ ಮಕ್ಕಳು ಮತ್ತು ಸಂತಾನೋತ್ಪತ್ತಿ ಯೋಜನಾ ನಿರ್ದೇಶಕ ಶ್ರೀನಿವಾಸ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಅವರಿಂದ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಬಳಿಕ ಮಾತಾ ಆಸ್ಪತ್ರೆಗೂ ಭೇಟಿ ನೀಡಿದ ಅಧಿಕಾರಿಗಳ ತಂಡ, ಇಡೀ ಆಸ್ಪತ್ರೆಯ ಕಟ್ಟಡ ಪರಿಶೀಲಿಸುವ ಜೊತೆಗೆ ಆಸ್ಪತ್ರೆ ಸಮೀಪದಲ್ಲಿರುವ ವಿವಿಧ ವ್ಯಾಪಾರಿಗಳಿಂದಲೂ ಮಾಹಿತಿ ಪಡೆದಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್, ಹೆಣ್ಣು ಭ್ರೂಣ ಹತ್ಯೆ ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಇಂತಹ ನೀಚ ಕೃತ್ಯವೆಸಗಿರುವವರ ವಿರುದ್ಧ ಕ್ರಮಕೈಗೊಳ್ಳಬೇಕಿದ್ದು, ನಾವು ಯಾವುದೇ ಕಾರಣಕ್ಕೂ ಇದನ್ನು ಬಿಡುವುದಿಲ್ಲ. ಇಡೀ ರಾಜ್ಯಾಧ್ಯಂತ ಇಂತಹ ಘಟನೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಎಲ್ಲವನ್ನೂ ಕೂಡ ನಾವು ಪರಿಶೀಲನೆ ಮಾಡುತ್ತಿದ್ದೇವೆ ಎಂದರು.
ಸದರಿ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳು ಯಾರು ಕೂಡ ವೈದ್ಯರಲ್ಲ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವವರು ವೈದ್ಯರಾಗಿದ್ದರೆ ನಮ್ಮಲ್ಲಿ ನೋಂದಣಿ ಆಗಿರುತ್ತಿತ್ತು. ಆದರೆ ಯಾರೋ ನೋಂದಣಿ ಆಗದಿರುವುದನ್ನ ಗಮನಿಸಿದರೆ, ಬಂಧಿತರು ನಕಲಿ ವೈದ್ಯರಾಗಿದ್ದಾರೆ. ಹೀಗಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಚಂದನ್ ಬಲ್ಲಾಳ್ ಯಾರು? ಹಾಗೂ ಬಂಧಿಸಲಾಗಿರುವ ಚಂದನ್ ಯಾರು? ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದರು.
ಪ್ರಕರಣ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ಐದು ತಿಂಗಳ ಹಿಂದಿನ ದಿನಾಂಕದ ನೋಟಿಸ್ ಅಂಟಿಸಿದ್ದಾರೆ. ಮಂಗಳವಾರದ ದಿಶಾ ಸಭೆಯಲ್ಲಿ ಪ್ರಕರಣದ ಸದ್ದು ಮಾಡಿದ ಬಳಿಕ ಮಾತಾ ಆಸ್ಪತ್ರೆಗೆ ನೋಟಿಸ್ ನೀಡಿರುವ ಶಂಕೆ ವ್ಯಕ್ತವಾಗಿದ್ದು, ರಾತ್ರೋರಾತ್ರಿ ನೋಟಿಸ್ ಅಂಟಿಸಿದ್ದಾರೆ ಎನ್ನಲಾಗುತ್ತಿದೆ. ಮಾತಾ ಆಸ್ಪತ್ರೆಗೆ ನೀಡಲಾಗಿರುವ ನೋಟಿಸ್‌ನಲ್ಲಿ 22-06-2023 ದಿನಾಂಕ ಮುದ್ರಣವಾಗಿರುವುದು ಈ ಎಲ್ಲ ಅನುಮಾನಗಳಿಗೆ ಕಾರಣವಾಗಿದೆ. ಮೂರು ತಿಂಗಳಲ್ಲಿ ಆಸ್ಪತ್ರೆಯಲ್ಲಿ ನಡೆದಿರುವ ಭ್ರೂಣ ತಪಾಸಣೆ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ ಮಾಹಿತಿ ಕೇಳಲಾಗಿದೆ.
ಹಳೇ ನೋಟಿಸ್ ಸಂಬಂಧ ತಾಲೂಕು ಆರೋಗ್ಯಾಧಿಕಾರಿಗೆ ಉತ್ತರ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
‘ನೋಟಿಸ್ ಜಾರಿಗೊಳಿಸಿರುವ ವಿಚಾರ ನಮಗೆ ತಿಳಿದಿಲ್ಲ. ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ಕ್ರಮವಹಿಸಲಾಗಿದೆ. ಮಾತಾ ಆಸ್ಪತ್ರೆ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿಲ್ಲ, ಮಾಧ್ಯಮಗಳಲ್ಲಿ ವರದಿ ಆಗುತ್ತಿರುವ ವಿಚಾರಗಳ ಬಗ್ಗೆ ಹಾಗೂ ಹಳೆಯ ನೋಟಿಸ್ ಅಂಟಿಸಿರುವ ಬಗ್ಗೆಯೂ ಮಾಹಿತಿ ಕೇಳಿದ್ದೇನೆ. ಒಂದೊಮ್ಮೆ ಇದರಲ್ಲಿ ಲೋಪವಾಗಿದ್ದರೆ ಅಧಿಕಾರಿಗಳ ಮೇಲೂ ಕ್ರಮಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.