ಜಿಲ್ಲೆ

ದಾಖಲೆ ಕೊಡದಿದ್ದರೆ ಕೇಸ್ ದಾಖಲಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸ್ಕ್ಯಾನಿಂಗ್ ಸೆಂಟರ್‌ಗೆ ಸಂಬಂಧಿಸಿದವರು ಗರ್ಭಿಣಿಯರ ವಿವರವನ್ನು ಬಾಲಿಕಾ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಿ ನಿಗದಿಪಡಿಸಿರುವ ದಾಖಲೆ ಹಾಜರುಪಡಿಸಬೇಕು. ಇಲ್ಲವಾದಲ್ಲಿ ಕಾಯ್ದೆ ಪ್ರಕಾರ ಪರವಾನಗಿ ರದ್ದು ಮಾಡಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಭ್ರೂಣಲಿಂಗ ಪತ್ತೆ ತಂತ್ರ(ದುರ್ಬಳಕೆ ಮತ್ತು ತಡೆ) ಕಾಯ್ದೆ-1994ರ ಬಗ್ಗೆ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆಂಟರ್‌ಗಳಲ್ಲಿ ಗರ್ಭಿಣಿಯರು ಸ್ಕ್ಯಾನಿಂಗ್ ನಡೆಸಿದಾಗ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ನಿಗದಿತ ನಮೂನೆಯಲ್ಲಿ ದಾಖಲಿಸಬೇಕು. ಮಾತ್ರವಲ್ಲದೆ ದಾಖಲೆಗಳನ್ನು ಕನಿಷ್ಟ ಎರಡು ವರ್ಷ ಸಂಗ್ರಹಿಸಬೇಕು. ಸ್ಕಾೃನಿಂಗ್ ಸೆಂಟರ್ ನಡೆಸಲು ಸರ್ಕಾರದಿಂದ ನಿಗದಿಪಡಿಸಿರುವ ಎಲ್ಲ ನಿಯಮಗಳನ್ನು ಪಾಲಿಸಬೇಕು. ಎಂಪ್ಯಾನಲ್ ಮಾಡಿಕೊಂಡಿರುವ ವೈದ್ಯರು ಮಾತ್ರ ಸ್ಕ್ಯಾನಿಂಗ್ ಕೆಲಸ ನಿರ್ವಹಿಸಬೇಕು. ಪಿ.ಸಿ, ಪಿ.ಡಿ.ಎನ್.ಟಿ ಕಾಯ್ದೆಯಡಿ ರಚಿಸಲಾಗಿರುವ ಸಮಿತಿಯು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಪ್ರತಿ 3 ತಿಂಗಳಿಗೊಮ್ಮೆ ಅಥವಾ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.

ಅನಕ್ಷರಸ್ಥರು ಹಾಗೂ ಮೂಢನಂಬಿಕೆಯಿಂದ ಬಹಳಷ್ಟು ಜನರು ಭ್ರೂಣಹತ್ಯೆಯಂತಹ ಸಮಾಜಘಾತುಕ ಕೆಲಸಕ್ಕೆ ಕೈ ಹಾಕುತ್ತಾರೆ. ಆದರೆ, ಸ್ಕ್ಯಾನಿಂಗ್ ಹಾಗೂ ಭ್ರೂಣಹತ್ಯೆ ಮಾಡುವವರು ವಿದ್ಯಾವಂತರು. ಇದರ ಪರಿಣಾಮ ಹಾಗೂ ಶಿಕ್ಷೆ ಅವರಿಗೆ ಕಟ್ಟಿಟ್ಟಬುತ್ತಿ. ಹೆಣ್ಣನ್ನು ದೇವತೆ ಎಂದು ಪೂಜಿಸುವ ಸಮಾಜ ಭ್ರೂಣದಲ್ಲೇ ಹೆಣ್ಣನ್ನು ಕೊಂದರೆ ಮಾನವೀಯ ಮೌಲ್ಯಗಳು ಸಮಾಜದಲ್ಲಿ ಉಳಿಯಲು ಸಾಧ್ಯವಿಲ್ಲ. ಗಂಡು ಮತ್ತು ಹೆಣ್ಣು ಸಮಾಜದ ಎರಡು ಮುಖಗಳು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚುತ್ತಿರುವುದರಿಂದ ಅದನ್ನು ತಡೆಗಟ್ಟಲು ಈಗಾಗಲೇ ಜಿಲ್ಲೆಯಲ್ಲಿ ತಂಡ ರಚನೆಯಾಗಿದೆ. ಇಂತಹ ಅಮಾನುಷ ಕೃತ್ಯಗಳು ಎಸಗುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ ಮತ್ತು ವರದಕ್ಷಿಣೆ ಎಂಬ ಅನಿಷ್ಟ ಪದ್ಧತಿಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದನ್ನು ಎಲ್ಲರೂ ಒಗ್ಗಟ್ಟಾಗಿ ಸೇರಿ ನಿರ್ಮೂಲನೆ ಮಾಡಬೇಕು, ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ವಸುಂಧರ ಭೂಪತಿ, ರಾಜ್ಯ ತಪಾಸಣಾ ಮತ್ತು ಮೇಲ್ವಿಚಾರಣೆ ಸಮಿತಿಯ ಸದಸ್ಯ ವಸಂತ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್ ಇತರರಿದ್ದರು.