ಮಂಡ್ಯ: ನಾಗರಿಕ ಸಮಾಜ ತಲೆತಗ್ಗಿಸುವಂತಹ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ದಂಧೆ ತಾರ್ಕಿಕ ಅಂತ್ಯ ಸಿಗುವ ಅನುಮಾನ ಕಾಡಲಾರಂಭಿಸಿದೆ. ಇದಕ್ಕೆ ಕಾರಣ ಅಧಿಕಾರಿಗಳ ನಡೆ.
ಭ್ರೂಣ ಪತ್ತೆ ದಂಧೆ ನಡೆಯುತ್ತಿರುವುದು ಕಣ್ಣಿಗೆ ಕಾಣುವಂತಹ ಸತ್ಯ ಎನ್ನಿಸಿಕೊಂಡಿದ್ದರೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಬಗ್ಗೆ ಯಾವುದೇ ಬೆಳವಣಿಗೆ ಕಂಡುಬರುತ್ತಿಲ್ಲ. ಬದಲಿಗೆ ಕಾಲದೂಡುವ ಕೆಲಸ ನಡೆಯುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಆಲೆಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳು, ಅಲ್ಲಿ ಯಾವುದೇ ಕುರುಹುಗಳಿಲ್ಲ ಎಂದಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಭ್ರೂಣ ಹತ್ಯೆ ತಡೆ ಕಾಯ್ದೆಯ ಸಕ್ಷಮ ಪ್ರಾಧಿಕಾರದ ನಿರ್ದೇಶಕ ಡಾ.ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಬೆಳವಣಿಗೆ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಪ್ರಮುಖವಾಗಿ ಭ್ರೂಣ ಪತ್ತೆಗೆ ಸಂಬಂಧಿಸಿದಂತೆ ವಿಮೋಚನಾ ಮಹಿಳಾ ಸಂಘಟನೆಯ ಜಿಲ್ಲಾ ಸಂಯೋಜಕ ಜನಾರ್ದನ್ ಹೂತಗೆರೆ ಅವರು, ದಂಧೆಗೆ ಸಂಬಂಧಿಸಿದ ಮಾಹಿತಿ ಕೊಡಲು ಮುಂದಾದರೂ ಅದಕ್ಕೆ ಸ್ಥಳೀಯ ಅಧಿಕಾರಿಗಳ ಅವಕಾಶ ನೀಡಿಲ್ಲ. ಬದಲಿಗೆ ಸ್ಥಳದಿಂದ ಕಾಲ್ಕಿಳುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಜನಾರ್ದನ್, ದಂಧೆ ಬಗ್ಗೆ ಹಲವು ಬಾರಿ ದೂರು ಕೊಟ್ಟಿದ್ದೇವೆ. ಆದಾಗ್ಯೂ ಯಾವುದೇ ಕ್ರಮವಾಗಿಲ್ಲ. ಇತ್ತ ಅಧಿಕಾರಿಗೆ ಮಾಹಿತಿ ಕೊಡುವುದಕ್ಕೂ ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಿನವಿಡೀ ಅಧಿಕಾರಿಗಳೊಂದಿಗೆ ಸಭೆ: ಪ್ರಕರಣದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದ ನಿರ್ದೇಶಕ ಡಾ.ಶ್ರೀನಿವಾಸ್, ಬುಧವಾರ ದಿನವಿಡೀ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಮಾಡಿ ಹಲವು ವಿಷಯದ ಬಗ್ಗೆ ಚರ್ಚೆ ನಡೆಸಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸರಣಿ ಸಭೆ ಮಾಡಲಾಗಿದೆ. ಮಾತ್ರವಲ್ಲದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚೆ ಮಾಡಲಾಗಿದೆ. ಈ ವೇಳೆ ತಾಲೂಕು ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್, ಈಗ ಸಿಕ್ಕಿರುವ ಆರೋಪಿಗಳಾರೂ ವೈದ್ಯರಲ್ಲ. ಅಲ್ಲದೆ ಯಾವುದೇ ತರಬೇತಿ ಪಡೆದಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರು ಗರ್ಭಪಾತವನ್ನು ಇಲ್ಲಿ ಮಾಡುತ್ತಿರಲಿಲ್ಲ. ಹೊರ ಜಿಲ್ಲೆಗಳಿಂದ ಮಹಿಳೆಯರನ್ನು ಕರೆದುಕೊಂಡು ಬರುತ್ತಿದ್ದರೂ ಎನ್ನುವ ಅನುಮಾನದ ಮೇಲೆ ಪೊಲೀಸ್ ಟ್ರ್ಯಾಕ್ ಆಗಿದೆ ಎಂದರು.
ಇದೊಂದು ರಾಕೆಟ್ ಆಗಿದ್ದು, ಇದರ ಆಳ ಅಗಲದ ಬಗೆಗೆ ಹಾಗೂ ಮಹಿಳೆಯರನ್ನು ಎಲ್ಲಿಂದ ಕರೆದುಕೊಂಡು ಬರುತ್ತಿದ್ದರು ಎಂಬ ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ. ಪರಿಶೀಲನೆ ವೇಳೆ ಯಾವ ಯಂತ್ರ ಬಳಸುತ್ತಿದ್ದರೂ, ಅದನ್ನ ಎಲ್ಲಿಂದ ತಂದಿದ್ದರೂ ಎಂಬ ಮಾಹಿತಿ ಸಿಗಬೇಕಿದೆ. ಇಂತಹ ದಂಧೆ ತಡೆಯುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅದಕ್ಕಾಗಿ ಒಂದು ತಂಡ ರಚನೆ ಮಾಡಲಾಗುತ್ತದೆ. ಎರಡು ದಿನದಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದ್ದು, ಅಲ್ಲಿ ಈಗ ಸಂಗ್ರಹಿಸಲಾಗಿರುವ ಮಾಹಿತಿ ನೀಡಲಾಗುತ್ತದೆ. ಪೊಲೀಸ್ ಈಗ ಹಿಡಿದಿರುವ ಕಾರಿಗೆ ಸಂಬಂಧಿಸಿದ ಮಾಹಿತಿಯನ್ನು ಐದು ತಿಂಗಳ ಹಿಂದೆಯೇ ನೀಡಿದ್ದೆವು. ನಾವು ನೀಡಿದ್ದ ವಾಹನದ ಮಾಹಿತಿ ಆಧಾರದ ಮೇಲೆ ಈಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಗೆ ನಾನ್ ಬೇಲಬಲ್ ಕೇಸ್ ಆಗಲಿದೆ ಎಂದರು.
ಆತಂಕ ವ್ಯಕ್ತಪಡಿಸಿದ ಆಯೋಗ
ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ತೆಗೆದುಕೊಂಡಿರುವ ಕ್ರಮದ ವರದಿಯನ್ನು ನೀಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದೆ.
ಮಂಡ್ಯದಲ್ಲಿ ನಡೆದ ಪ್ರಕರಣದಲ್ಲಿ ವೈದ್ಯರೇ ಭಾಗಿಯಾಗಿರುವುದು ಅಮಾನವೀಯ. ಇದು ರಾಜ್ಯವನ್ನೇ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಕಾಯ್ದೆ, ಸಮಿತಿಗಳಿದ್ದರೂ ಇಂತಹ ಪ್ರಕರಣ ನಡೆದಿದೆ. ಪ್ರಮುಖವಾಗಿ ಜಿಲ್ಲಾ ಸಲಹಾ ಸಮಿತಿ, ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣಾ ಸಮಿತಿ ವೈಲ್ಯದಿಂದಾಗಿ ಈ ಪ್ರಕರಣ ನಡೆದಿದೆ. ಜತೆಗೆ ಪಿ.ಸಿ ಆ್ಯಂಡ್ ಪಿ.ಎನ್.ಡಿ.ಟಿ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ಈ ಪ್ರಕರಣವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಅದರಂತೆ ಈವರೆಗೆ ತೆಗೆದುಕೊಂಡಿರುವ ಮಾಹಿತಿ ಸಲ್ಲಿಸುವುದರ ಜತೆಗೆ ಮುಂದೆ ಇಂತಹ ಘಟನೆ ನಡೆಯದಂತೆ ಇಲಾಖೆಯಿಂದ ಸುತ್ತೋಲೆ ಹೊರಡಿಸಬೇಕು. ಜಿಲ್ಲಾಮಟ್ಟದಲ್ಲಿರುವ ಸಮಿತಿಗಳು ನಿರಂತರವಾಗಿ ಆಸ್ಪತ್ರೆ ಮತ್ತು ಸ್ಕಾೃನಿಂಗ್ ಸೆಂಟರ್‌ಗೆ ಭೇಟಿ ನೀಡಿ ಸಭೆ ಮಾಡುವಂತೆ ಸೂಕ್ತ ನಿರ್ದೇಶನ ನೀಡುವಂತೆ ಸಲಹೆ ನೀಡಿದೆ.