ಜಿಲ್ಲೆ

ಗೃಹ ಸಚಿವರಿಗೆ ಪತ್ರ ಬರೆದ ಶಾಸಕ: ಪೊಲೀಸ್ ತನಿಖೆಗೆ ಒತ್ತಾಯಿಸಿದ ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ: ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ನಡೆಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪತ್ರ ಬರೆದಿದ್ದಾರೆ.
ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಡೆದಿದೆ ಎನ್ನಲಾದ ಭ್ರೂಣಲಿಂಗ ಪತ್ತೆ ಕಾರ್ಯವು ಕೆಲವು ವರ್ಷದಿಂದ ನಿರರ್ಗಳವಾಗಿ ನಡೆಸುತ್ತಿದ್ದರು ಎಂದು ವರದಿ ಬರುತ್ತಿದೆ. ಕೆಲ ಮಹಿಳೆಯರು ಅಕ್ರಮವಾಗಿ ಗರ್ಭಪಾತ ಮಾಡಿಸಿದ್ದಾರೆಂದು ಮಾಹಿತಿ ಇದೆ. 
ಗ್ರಾಮೀಣ ಅಥವಾ ನಗರ ಭಾಗದಲ್ಲಿ ಗರ್ಭವತಿಯಾದವರ ಮಾಹಿತಿ ಪ್ರಾಥಮಿಕವಾಗಿ ಆಶಾ ಕಾರ್ಯಕರ್ತರಿಗೆ ದೊರೆಯಲಿದೆ. ಇವರ ಮೇಲ್ವಿಚಾರಕರಾಗಿ ತಾಲೂಕು ವೈದ್ಯಾಧಿಕಾರಿ ಇರುತ್ತಾರೆ. ಇವರೆಲ್ಲರ ಕಣ್ಣು ತಪ್ಪಿಸಿ ಈ ಒಂದು ದುಷ್ಕೃತ ನಡೆಯಲು ಹೇಗೆ ಸಾಧ್ಯ ಎನ್ನುವುದನ್ನು ನನ್ನ ಪ್ರಶ್ನೆಯಾಗಿದೆ. ಸ್ಥಳೀಯ ಅಧಿಕಾರಿಗಳ ಸಹಕಾರವಿಲ್ಲದೆ ವ್ಯವಸ್ಥಿತವಾಗಿ ಈ ಒಂದು ಕ್ರೌರ್ಯ ನಡೆಯಲು ಹೇಗೆ ಸಾಧ್ಯ ಎನ್ನುವುದನ್ನು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜತೆಗೆ ಇದು ನಮ್ಮ ಜಿಲ್ಲೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಪೊಲೀಸ್ ಇಲಾಖೆಯಿಂದ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.