ಜಿಲ್ಲೆ

ಅಧಿಕಾರಿಗಳಿಂದ ಬೇಜವಾಬ್ದಾರಿ ವರ್ತನೆ: ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಬೇಸರ

ಮಂಡ್ಯ: ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣವನ ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತಿಲ್ಲ ಸಚಿವ ದಿನೇಶ್ ಗುಂಡೂರಾವ್ ಅಸಮಧಾನ ವ್ಯಕ್ತಪಡಿಸಿದರು.
ತಾಲೂಕಿನ ಹಾಡ್ಯ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಎನ್ನುವುದು ಅತ್ಯಂತ ಕ್ರೂರ. ಇಂತಹ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣ ಸಂಬಂಧ ಭೇಟಿ ನೀಡಿದ್ದೇನೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಬಂಧಿತ ವ್ಯಕ್ತಿ ಬಗ್ಗೆ ಆರೋಗ್ಯ ಇಲಾಖೆಯವರು ಹಿಂದೆಯೇ ನಿಗಾ ಇಟ್ಟಿದ್ದರು. ಎರಡು ತಿಂಗಳ ಹಿಂದೆ ಇಲಾಖೆ ಅಧಿಕಾರಿಗಳು ಆಲೆಮನೆಗೆ ಭೇಟಿ ನೀಡಿದ್ದರು. ಆದರೆ, ಆ ವೇಳೆ ಇಲ್ಲಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ, ಸ್ಕ್ಯಾನಿಂಗ್ ಉಪಕರಣವೂ ಪತ್ತೆಯಾಗಿರಲಿಲ್ಲ. ಆದರೀಗ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಇದನ್ನು ಗಮನಿಸಿದರೆ ನಮ್ಮ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಇದೆ ಎನ್ನುವುದು ಎದ್ದುಕಾಣುತ್ತಿದೆ ಎಂದರು.
ಹಿಂದೆ ಮಾಹಿತಿ ಸಿಕ್ಕಾಗಲೇ ಬೆನ್ನು ಬಿದ್ದು ತನಿಖೆ ಮಾಡಬೇಕಿತ್ತು. ಪ್ರಕರಣದ ಸಮಗ್ರ ತನಿಖೆಗಾಗಿ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ. ಈ ಪ್ರಕರಣದಲ್ಲಿ ಸಾವಿರಾರು ಗರ್ಭಪಾತ ಆಗಿವೆ. ದಂಧೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಕಠಿಣ ಶಿಕ್ಷೆಯಾಗಬೇಕು. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಕಟ್ಟುನಿಟ್ಟಿನ ಕ್ರಮಕ್ಕಾಗಿ ರಾಜ್ಯಾದ್ಯಂತ ಹೊಸ ಕಾರ್ಯಕ್ಮ ರೂಪಿಸಲಾಗುವುದು.
ಲಿಂಗಾನುಪಾತದಲ್ಲಿ ರಾಜ್ಯದಲ್ಲಿ ಭಾರೀ ವ್ಯತ್ಯಾಸವಿದೆ. ಇದು ಸಮಾಜದ ಮೂಲ ಪಿಡುಗಾಗುವ ಸಾಧ್ಯತೆಯಿದೆ. ಜನರು ಇಂತಹ ಪ್ರಕರಣದಲ್ಲಿ ಭಾಗಿಯಾಗಲು ಭಯ ಪಡಬೇಕು ಎಂದು ಹೇಳಿದರು.