ಮಂಡ್ಯ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಮಂಡ್ಯ ತಾಲೂಕು ಹುಳ್ಳೇನಹಳ್ಳಿ ಗ್ರಾಮದ ಆಲೆಮನೆಯಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಮಾಡುತ್ತಿರುವ ಹೊರ ಬಂದಿರುವ ವಿಚಾರ ದಿಗ್ಭ್ರಮೆ ತರಿಸಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದರೂ ಭ್ರೂಣ ಎಂದಾಕ್ಷಣ ತೆಗೆದು ಹಾಕುವ ಕೆಲಸ ಮಾಡುತ್ತಿದ್ದಾರೆ. ಕೆಲ ಧನದಾಹಿ ವೈದ್ಯರು ಇಂತಹ ಪಾಪದ ಕೆಲಸದಲ್ಲಿ ತೊಡಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಗಂಡಿಗೆ ಹೆಣ್ಣು ಸಿಗದಿರುವುದು ಸಹ ಭ್ರೂಣಹತ್ಯೆ ಒಂದು ಕಾರಣವಾಗಿದೆ. ಇಷ್ಟೆಲ್ಲ ಇದ್ದರೂ ಕೂಡ ನಮ್ಮ ಜನರಿಗೆ ಬುದ್ಧಿ ಬರುತ್ತಿಲ್ಲ. ಹೆಣ್ಣು ಎಂಬ ಕಾರಣಕ್ಕೆ ಭ್ರೂಣದಲ್ಲಿಯೇ ಸಾಯಿಸುವ ಪ್ರಕ್ರಿಯೆ ನಿಲ್ಲಿಸಬೇಕು. ಪ್ರಮುಖವಾಗಿ ಭ್ರೂಣ ಹತ್ಯೆಯಲ್ಲಿ ಭಾಗಿಯಾಗುವ ಯಾವುದೇ ಪ್ರಭಾವಿ ವ್ಯಕ್ತಿ ಅಥವಾ ವೈದ್ಯನಾಗಿರಲಿ ಅವರಿಗೆ ಶಿಕ್ಷೆ ಆಗಲೇಬೇಕು. ಪ್ರತಿ ಸ್ಕ್ಯಾನಿಂಗ್ ಸೆಂಟರ್ ಮೇಲೆ ನಿಗಾ ವಹಿಸಲು ವಿಶೇಷ ತಂಡ ರಚನೆ ಮಾಡಬೇಕು. ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ರತ್ನಮ್ಮ, ಶಿವಕುಮಾರ ಆರಾಧ್ಯ, ಹೊಸಹಳ್ಳಿ ಶಿವು, ಪ್ರಸನ್ನ, ನಂದೀಶ್ ಇತರರಿದ್ದರು.