ಮೈಸೂರು: ಸಂಸ್ಕೃತಿ ಸಂಪನ್ನವಾದ ನಮ್ಮ ದೇಶದಲ್ಲಿ ಸಂತಸ ಸಮೃದ್ಧಿಯ ಹಬ್ಬಗಳು ವರ್ಷಪೂರ್ತಿ ಜರಗುತ್ತವೆ ಎಂದು ಲೇಖಕ ಬನ್ನೂರು ಕೆ.ರಾಜು ಹೇಳಿದರು.
ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದಿಂದ ನಗರದ ಅಶೋಕಪುರಂನ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರ್ಷ ಪೂರ್ತಿ ಒಂದಿಲ್ಲೊಂದು ಹಬ್ಬಗಳು, ವಿಶೇಷ ದಿನಗಳು, ಜಯಂತಿಗಳು, ದಿನಾಚರಣೆಗಳು ನಮ್ಮಲ್ಲಿ ನಡೆಯುತ್ತವೆ. ಇವೆಲ್ಲವೂ ನಮ್ಮ ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯ ಪ್ರತೀಕ ಎಂದು ಬಣ್ಣಿಸಿದರು.
ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾವಂತರೇ ಆಗಿದ್ದು ಅವರೊಳಗೆ ಅನೇಕ ಬಗೆಯ ಕಲೆಗಳಿವೆ. ಅವುಗಳಲ್ಲಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ರಂಗೋಲಿ ಕಲೆಗೆ ಬಹು ಮಹತ್ವದ ಸ್ಥಾನ ಉಂಟು ಎಂದರು.
ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹಬ್ಬವು ಹೊಸ ವರ್ಷವಾದರೂ ಸಹ ಕ್ಯಾಲೆಂಡರ್ ಅನುಸರಣೆಯ ಪ್ರಕಾರ ಜನವರಿ ತಿಂಗಳ ಹೊಸ ವರ್ಷದ ಮೊದಲ ಹಬ್ಬವಾಗಿ ಬರುವ ಸಂಕ್ರಾಂತಿ ಹಬ್ಬಕ್ಕೆ ನಮ್ಮಲ್ಲಿ ಬಹಳ ಹಿಂದಿನಿಂದಲೂ ವಿಶೇಷ ಮಹತ್ವ ಮತ್ತು ವೈಶಿಷ್ಟೃ ಇದೆ ಎಂದು ಹೇಳಿದರು.
ಸಂತಸ, ಉಲ್ಲಾಸ, ಸಡಗರ, ಸಂಭ್ರಮಗಳ ಸಂಕೇತವಾಗಿ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬ ಎಂದರೆ ಅದು ವಿಶೇಷವಾಗಿ ರೈತರ ಬದುಕಿನ ಸುಗ್ಗಿ ಹಬ್ಬ. ಕೃಷಿಕರಿಗೆ ಇದು ಹಿಗ್ಗಿನ ಹಬ್ಬ. ಹೊಲ-ಗದ್ದೆಗಳ ಬೆಳೆ ಫಸಲಾಗಿ ದವಸ-ಧಾನ್ಯಗಳು ರೈತರ ಮನೆ ಸೇರುತ್ತದೆ. ನಂತರ ಅನ್ನದಾತನ ಮುಖೇನ ಇಡೀ ದೇಶಕ್ಕೆ ಹಂಚಲ್ಪಟ್ಟು ನಾಡಿಗೆ ನಾಡೇ ಸಡಗರ, ಹರ್ಷದಿಂದ ಉಲ್ಲಾಸಗೊಂಡು ಗರಿಗೆದರಿದ ನಲಿವಿಲಿನಂತೆ ಸಂಭ್ರಮಿಸುವ ಕಾಲವಿದು ಎಂದರು.
ಸಂಕ್ರಾಂತಿಯಲ್ಲಿ ಗೋಪೂಜೆಗೆ ವಿಶೇಷ ಆದ್ಯತೆ. ಹಾಗೆಯೇ ಎಳ್ಳು-ಬೆಲ್ಲ ಮಹತ್ವದ ಸ್ಥಾನ ಪಡೆದಿದ್ದು, ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತನಾಡಿ ಎಂಬ ನಾಣ್ಣುಡಿಯಂತೆ ಸಂಕ್ರಾಂತಿಗೆ ಎಳ್ಳು ಬೀರುವ ಸಂಪ್ರದಾಯವಿದೆ. ಅಷ್ಟೇ ಅಲ್ಲ, ಸಂಕ್ರಾಂತಿಯಂದು ಏನೇ ಸಂಕಲ್ಪ ಮಾಡಿಕೊಂಡರೂ ಅದು ನೆರವೇರುತ್ತದೆಂಬ ನಂಬಿಕೆಯುಂಟು. ಆದ್ದರಿಂದ ಬೆಳಕಿನ ಸಂಕೇತವಾದ ಸೂರ್ಯಾರಾಧನೆಯ ಮಹತ್ವದ ದಿನವೂ ಆಗಿದ್ದು, ವಿದ್ಯಾರ್ಥಿಗಳು ಒಳ್ಳೆಯ ಗುರಿ ಇಟ್ಟುಕೊಂಡು ಚೆನ್ನಾಗಿ ಓದಿ ಗುರಿ ಸಾಧಿಸುವ ಸಂಕಲ್ಪ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಕೆ.ಮಹೇಶ್ ಮಾತನಾಡಿ, ಸಂಕ್ರಾಂತಿ ಪ್ರಕೃತಿಯ ಹಬ್ಬ, ರೈತರ ಹಬ್ಬ, ಗೋವುಗಳ ಹಬ್ಬ, ವಿಶೇಷವಾಗಿ ಹೆಣ್ಣು ಮಕ್ಕಳ ಹಬ್ಬ. ಎಳ್ಳು-ಬೆಲ್ಲ ಬೀರಿ ಒಳ್ಳೆಯ ಮಾತನಾಡುವ ಒಳಿತಿನ ಆಶಯದ ಹಬ್ಬ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಂಕಲ್ಪ ಮಾಡಿಕೊಳ್ಳಬೇಕು ಎಂದರು.
ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರಾದ ನಿವೃತ್ತ ಶಿಕ್ಷಕ ಎ.ಸಂಗಪ್ಪ ಮಾತನಾಡಿ ಕಾರ್ಯಕ್ರಮದ ಹಿನ್ನೆಲೆಯನ್ನು ಪ್ರಸ್ತುತಪಡಿಸಿದರು.
ರಂಗೋಲಿ ಸ್ಪರ್ಧೆ ವಿಜೇತರಾದ ವಿದ್ಯಾರ್ಥಿನಿಯರಾದ ಅರ್.ಕನಕಾ, ವಿ.ಅಶ್ವಿನಿ, ಬಿ.ಗೀತಾ, ಎಸ್.ಕೆ.ಪುಷ್ಪಾ ಅವರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಶಿಕ್ಷಕಿ ಜ್ಯೋತಿ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಶಿವಶಂಕರ್ ಇತರರು ಇದ್ದರು.