ಮಂಗಳೂರು: ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದೀಪಾವಳಿ ಹಬ್ಬವನ್ನು ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಆಚರಿಸಬೇಕು. ಸೂಕ್ತ ಮುಂಜಾಗೃತಾ ಕ್ರಮ ಅನುಸರಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.
ಹಬ್ಬ ಆಚರಿಸುವಾಗ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಗದಿಪಡಿಸಿದ ದಿನಾಂಕ ಮತ್ತು ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಸಿಡಿಮದ್ದು ಮಾರಾಟ ಅಂಗಡಿ ತೆರೆಯಬೇಕು. ಅಧಿಕೃತ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡಬೇಕು. ನ.1ರಿಂದ 17ರವರೆಗೆ ಮಾತ್ರ ತೆರೆದಿರಬೇಕು.
ಮಳಿಗೆಗಳಲ್ಲಿ ಸರಾಗವಾಗಿ ಗಾಳಿಯಾಡುವಂತಿರಬೇಕು. ಮಳಿಗೆಗಳ ಮಧ್ಯೆ ಕನಿಷ್ಠ 6 ಮೀ. ಅಂತರವಿರಬೇಕು. ಪರವಾನಗಿ ಪಡೆದವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು. ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಮಳಿಗೆಗಳ ಸುತ್ತಮುತ್ತ ದಿನ ನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಪಟಾಕಿ ಖರೀದಿಗೆ ಬರುವವರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.