ಹರಿಹರ: ಹರಿಹರದಲ್ಲಿ ಬುಧವಾರ ಪುರಾಣ ಪ್ರಸಿದ್ಧ ಕ್ಷೇತ್ರನಾಥ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರಮದಿಂದ ನಡೆಯಿತು.
ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ ಶಿವಮೊಗ್ಗ ವೃತ್ತದವರೆಗೆ ಭಕ್ತರು ಮಹಾದೇವನ ನಾಮಸ್ಮರಣೆ ಮಾಡುತ್ತಾ ರಥ ಎಳೆದರು. ತೇರಿನ ಮುಕುಟಕ್ಕೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದರು. ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.
ರಥೋತ್ಸವಕ್ಕೂ ಮುನ್ನ ಹರಿಹರೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ರಥದೊಳಗೆ ಸ್ಥಾಪಿಸಲಾಯಿತು.
ರಥ ಶಿವಮೊಗ್ಗ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನಗರದ ಶಿವಮೊಗ್ಗ, ಹರಪನಹಳ್ಳಿ ಹಾಗೂ ದಾವಣಗೆರೆ ಮಾರ್ಗ ಬಂದ್ ಆಗಿದ್ದರಿಂದ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.
ಬೆಳಗ್ಗೆ ಹರಿಹರೇಶ್ವರ ಸ್ವಾಮಿ ಹಾಗೂ ಲಕ್ಷ್ಮೀ ದೇವಿಗೆ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ನವಗ್ರಹ ಪೂಜೆ, ಜಪ ಹೋಮ ಹವನಾದಿಗಳನ್ನು ನಡೆಸಲಾಯಿತು.
ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್, ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಎಸ್.ಎಂ. ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ನಗರಸಭೆ ಸದಸ್ಯರು, ದೇವಸ್ಥಾನ ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ದೇವಸ್ಥಾನದ ಸಮಿತಿ ಹಾಗೂ ಕೋಟೆಕೇರಿ ಗಜಾನನ ಯುವಕ ಸಂಘದ ಸಹಯೋಗದಲ್ಲಿ ಸಮೀಪದ ಬಿರ್ಲಾ ಕಲ್ಯಾಣ ಮಂಟಪದಲ್ಲಿ, ಎನ್.ಎಚ್. ಶ್ರೀನಿವಾಸ್ ಬಳಗ, ಗಣಪಾಸ್ ಇನೋವೇಟಿವ್ ಗ್ರೂಪ್ ಸೇರಿ ಮತ್ತಿತರ ಸಂಘಗಳಿಂದ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಿದರು.
ದಾಸರ ತಂಡ: ರಥೋತ್ಸವದಲ್ಲಿ ನಗರ ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ದಾಸ ಪರಂಪರೆ ಅನುಯಾಯಿಗಳು ಶ್ವೇತವಸ್ತ್ರ ಧಾರಿಗಳಾಗಿ ಭಾಗಿಯಾಗಿ ಕೀರ್ತನೆಗಳನ್ನು ಹಾಡಿದರು.
ಫೆ.13 ರ ಗುರುವಾರ ಸ್ಥಾಪಿತ ದೇವತಾ ಪೂಜೆ, ನಾಂದಿ, ಕಂಕಣ ವಿಸರ್ಜನೆ, ಧ್ವಜ ವಿಸರ್ಜನೆ, ಅವಭೃತ ಸ್ನಾನಗಳೊಂದಿಗೆ ಉತ್ಸವಾದಿಗಳು ಪೂರ್ಣಗೊಳ್ಳಲಿದೆ ಮತ್ತು ಸಂಜೆ 6ಕ್ಕೆ ನಟರಾಜ ನಾಟ್ಯಕೇಂದ್ರ ಬೆಂಗಳೂರು ಕಲಾವಿದರಿಂದ ಭರತನಾಟ್ಯ ನಂತರ ಶ್ರೀನಿಧಿ ಹರಿಹರ ಇವರಿಂದ ವೀಣಾ ವಾದನ ಕಾರ್ಯಕ್ರಮ ನಡೆಯಲಿದೆ.
ಮೂರು ದಿನ ಜಾತ್ರೆ: ದೇವಸ್ಥಾನ ರಸ್ತೆಯಲ್ಲಿ ಆಹಾರ ಮತ್ತು ಅಲಂಕಾರಿಕ ವಸ್ತುಗಳ ನೂರಾರು ಅಂಗಡಿಗಳು ತಲೆಎತ್ತಿದ್ದು, 3 ದಿನ ಜಾತ್ರೆ ಸಡಗರ ನಡೆಯಲಿದೆ. ಪ್ರತಿ ವರ್ಷ ನಡೆಯುವ ರಥೋತ್ಸವಕ್ಕೆ ಬೆಂಗಳೂರು, ಹಾಸನ, ಅರಸೀಕೆರೆ, ಕಡೂರು, ಬೀರೂರು ಸೇರಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.