ಬೈಲಕುಪ್ಪೆ: ಹಳೆಯೂರು ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಶನೈಶ್ಚರ ದೇವರ ಉತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಯೂರು ಗ್ರಾಮದ ಹೊರವಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಶನೈಶ್ಚರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರ ಸಹಕಾರದಿಂದ ಯುವಕರು ಬುಧವಾರ ಮುಂಜಾನೆಯಿಂದಲೇ ದೇವಸ್ಥಾನ ಸ್ವಚ್ಛಗೊಳಿಸಿ ತಳಿರು-ತೋರಣ, ವಿವಿಧ ವಿದ್ಯುತ್ ದ್ವೀಪಗಳಿಂದ ಅಲಂಕರಿಸಿ ದೇವಸ್ಥಾನದ ಗರ್ಭಗುಡಿಯಲ್ಲಿ ಶನಿ ದೇವರ ವಿಗ್ರಹವನ್ನು ಕುರಿಸಿ ಅರ್ಚಕ ಗಣೇಶ್ ಮತ್ತು ತಂಡದವರಿಂದ ವಿವಿಧ ಹೋಮಗಳನ್ನು ಮಾಡಿ ಮಹಾಮಂಗಳಾರತಿ ನೆರವೇರಿಸಿದರು. ನಂತರ ವಾಹನದಲ್ಲಿ ಶನಿದೇವರ ವಿಗ್ರಹವನ್ನು ಕೂರಿಸಿ ಕಾವೇರಿ ನದಿಗೆ ಕೊಂಡೊಯ್ದು ಅರ್ಚಕರಿಂದ ವಿವಿಧ ಪೂಜಾ ಹೋಮಗಳನ್ನು ಮಾಡಿ ವಾದ್ಯಗೋಷ್ಠಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಬುಧವಾರ ರಾತ್ರಿ ಮೆರವಣಿಗೆ ನಡೆಸಿದರು.
ನಂತರ ಮೂಲಸ್ಥಾನವಾದ ಹಳೆಯೂರು ಗ್ರಾಮದ ಶನಿದೇವರ ದೇವಸ್ಥಾನ ಕ್ಕೆ ಕೊಂಡೊಯ್ದು ಗರ್ಭಗುಡಿಗೆ ಕೂರಿಸಿ ಪೂಜಾ ಕಾರ್ಯಕ್ರಮ ಏರ್ಪಡಿಸಿದರು. ಗುರುವಾರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಗ್ರಾಮದ ಯುವ ಮುಖಂಡ ರಾಮು ಮಾತನಾಡಿ, ಬೈಲಕುಪ್ಪೆ ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿ ಬರುವಂತಹ ಭಕ್ತಾದಿಗಳಿಗೆ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಿಸಿಕೊಟ್ಟು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಪ್ರತಿ ಶನಿವಾರ ಮತ್ತು ಬುಧವಾರ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯುವುದರಿಂದ ಭಕ್ತಾದಿಗಳಿಗೆ ಶೌಚಗೃಹ ವ್ಯವಸ್ಥೆ ಇಲ್ಲದಿರುವುದರಿಂದ ತುಂಬ ತೊಂದರೆಯಾಗಿದೆ. ಅಧಿಕಾರಿಗಳು ಪರಿಶೀಲಿಸಿ ಶೌಚಗೃಹ ವ್ಯವಸ್ಥೆ ಮಾಡಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಗ್ರಾಮಸ್ಥರಾದ ರಾಮ ಜವರೇಗೌಡ ಪುರೇಗೌಡ ಆದರ್ಶ ತಮ್ಮಯ್ಯ ಸಂದೇಶ್ ಪ್ರದೀಪ್ ಗಣೇಶ್ ಭಕ್ತಾದಿಗಳಾದ ಗೋವಿಂದ ವೇಣು, ಗ್ರಾಮ ಪಂಚಾಯಿತಿ ಸದಸ್ಯ ರಘು ಇದ್ದರು.