ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ವಿವಿಧ ದೇವರುಗಳ ಉತ್ಸವ ಮೂರ್ತಿ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಲೊಕ್ಕನಹಳ್ಳಿ ಗ್ರಾಮ ಸಮೀಪದ ಬೇಡೆಗೆರೆ ಕಾಡಂಚಿನಲ್ಲಿರುವ ಶ್ರೀ ಹಿಂಬಿ ಮಹದೇಶ್ವರ ದೇಗುಲದಲ್ಲಿ ಮಂಗಳವಾರ ಸಂಜೆ ಕೊಂಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ಕೊಂಡ ಹಾಯ್ದದರು. ದೇಗುಲವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹದೇಶ್ವರ ಸ್ವಾಮಿಯ ಮೂರ್ತಿಯನ್ನು ವಿವಿಧ ಹೂಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು.
ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ಕಾಡಂಚಿನಲ್ಲಿರುವ ಶ್ರೀ ಹಿಂಬಿ ಮಹದೇಶ್ವರ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮಸ್ಥರು ಹಾಗೂ ಅರ್ಚಕರು ಸಂಪ್ರದಾಯದಂತೆ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಲೊಕ್ಕನಹಳ್ಳಿ ದೊಡ್ಡಕೆರೆಯ ಮೈದಾನಕ್ಕೆ ತೆರಳಿ ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು.
ಇದೇ ವೇಳೆ ಗ್ರಾಮ ದೇವತೆಗಳಾದ ಮುತ್ತುರಾಯಸ್ವಾಮಿ, ಪೆರುಮಾಳಸ್ವಾಮಿ, ಕೋಪರ ಹುಚ್ಚಮ್ಮ, ಷಣ್ಮುಗ, ಮಾರಮ್ಮ, ಸಂಪಿಗೇಶ್ವರ, ಬಸವ, ಕಂಚಿನ ಬಸವ, ಸಿದ್ದಪ್ಪಾಜಿ ದೇವರುಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಹನೂರು ಸೇರಿದಂತೆ ಕಂಡಯ್ಯನಪಾಳ್ಯ, ದೊಡ್ಡಮಾಲಾಪುರ, ಚಿಕ್ಕಮಾಲಾಪುರ, ಮಹಾಲಿಂಗನಕಟ್ಟೆ, ಸಿರಗೋಡು, ಸುಳಿಮೇಡು, ಆಂಡಿಪಾಳ್ಯ, ಬೂದಿಪಡಗ, ಕಡುವಾಳೆ, ಉದ್ದಟ್ಟಿ, ಒಡೆಯರಪಾಳ್ಯ, ಪಿ.ಜಿ. ಪಾಳ್ಯ, ಚನ್ನಾಲಿಂಗನಹಳ್ಳಿ, ಕಣ್ಣೂರು ಗ್ರಾಮಗಳ ಜನರು ಭಾಗವಹಿಸಿದ್ದರು.