ಜಿಲ್ಲೆ

ಹೊಳಲು ಗ್ರಾಮದಲ್ಲಿ ಅದ್ದೂರಿ ದೇವರ ಉತ್ಸವ: ತಗಡೂರಯ್ಯಸ್ವಾಮಿ ದೇವಸ್ಥಾನದಲ್ಲಿ ರಜತ ಕವಚ ಪ್ರೋಕ್ಷಣೆ ಕಾರ್ಯಕ್ರಮ

ಮಂಡ್ಯ: ತಾಲೂಕಿನ ಹೊಳಲು ಗ್ರಾಮದ ಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್ ವತಿಯಿಂದ ತಗಡೂರಯ್ಯಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ನೂತನ ರಜತ ಕವಚ ಸಂಪ್ರೋಕ್ಷಣಾ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯ ಆರಂಭವಾಯಿತು. ಬಲಮುರಿ ಗಣಪತಿ ದೇವಾಲಯದ ಆವರಣದಲ್ಲಿ ದೊಡ್ಡಯ್ಯ, ಬೀರೇಶ್ವರಸ್ವಾಮಿ, ಮಲ್ಲಿಗೆರೆ ಹುಚ್ಚುರಾಯಸ್ವಾಮಿ, ವದೇಸಮುದ್ರ ಚಿಕ್ಕಯ್ಯ ಬೀರೇಶ್ವರಸ್ವಾಮಿ, ಏಳೂರಮ್ಮ, ಹುಚ್ಚಮ್ಮ, ಚಿಕ್ಕನಾಳಮ್ಮ, ತಗಡೂರಯ್ಯಸ್ವಾಮಿ ದೇವರಿಗೆ ಹೂ ಹೊಂಬಾಳೆಯಿಂದ ಅಲಂಕರಿಸಿ, ದೊಡ್ಡಯ್ಯಸ್ವಾಮಿ ದೇವಾಲಯದ ಆವರಣದಲ್ಲಿ ಪೂಜೆ ನೆರವೇರಿಸಲಾಯಿತು. ಬಳಿಕ ಹೊಳಲು ಗ್ರಾಮದ ರಂಗಮಂದಿರದಲ್ಲಿ ಎಂಟು ದೇವರು ಉತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಸ್ವಾಮಿಗೆ ವೇದಿಕಾರ್ಚನೆ, ಗಣಪತಿ ಹೋಮ, ಸಂಪ್ರೋಕ್ಷಣಾ ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

ಗೊರವಾಲೆ ಉಮಾಶಂಕರ್ ಅವರ ಮಾಧುರ್ಯ ಕಲಾ ವೇದಿಕೆಯಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಸಮುದಾಯ, ಹೊಳಲು, ಎಚ್.ಮಲ್ಲಿಗೆರೆ, ವದೇಸಮುದ್ರ, ಹಳೇಬೂದನೂರು, ಹೊಳಲು ಗ್ರಾಮದ ಮುಖಂಡರು ಭಾಗವಹಿಸಿದ್ದರು.