ಜಿಲ್ಲೆ

ಏಳು ಗ್ರಾಮಗಳಿಗಿಲ್ಲ ನಾಳೆ ದೀಪಾವಳಿ ಆಚರಣೆ

ಗುಂಡ್ಲುಪೇಟೆ: ದೇಶಾದ್ಯಂತ ನಾಳೆ ಸಡಗರದಿಂದ ದೀಪಾವಳಿ ಆಚರಿಸುತ್ತಿದ್ದರೂ ತಾಲೂಕಿನ ಏಳು ಗ್ರಾಮಗಳಲ್ಲಿ ಮಾತ್ರ ಆಚರಣೆ ಮಾಡುತ್ತಿಲ್ಲ.


ನಳೂರು ಸುತ್ತಮುತ್ತಲಿನ ಏಳು ಗ್ರಾಮಗಳಾದ ನೇನೆಕಟ್ಟೆ, ವೀರನಪುರ, ಇಂಗಲವಾಡಿ, ಮಾಡ್ರಹಳ್ಳಿ, ಮಳವಳ್ಳಿ, ಬೆಂಡಗಳ್ಳಿ, ಬನ್ನಿತಾಳಪುರಗಳಲ್ಲಿ ಸುಮಾವರು ವರ್ಷಗಳ ಹಿಂದೆ ದೀಪಾವಳಿ ಹಬ್ಬವನ್ನು ಅದೇ ದಿನ ಆಚರಣೆ ಮಾಡಿದ ನಂತರ ಎಲ್ಲ ಗ್ರಾಮಗಳಲ್ಲಿಯೂ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡು ತೀರಿ ಹೋಗಿದ್ದವಂತೆ.


ಜಾನುವಾರುಗಳ ಸಾವಿನ ಹಿನ್ನೆಲೆಯಲ್ಲಿ ಸಭೆ ನಡೆಸಿದ ಗ್ರಾಮಸ್ಥರು ಬುಧವಾರದಂದು ಹಬ್ಬ ಮಾತ್ರ ಆಚರಿಸುವುದಾಗಿ ಪ್ರಾರ್ಥನೆ ಮಾಡಿಕೊಂಡು ತಲೆಮಾರುಗಳಿಂದಲೂ ಅದರಂತೆ ನಡೆದುಕೊಳ್ಳುತ್ತ ಬಂದಿದ್ದಾರೆ. ಏಳರಲ್ಲಿ ಆರು ಗ್ರಾಮಗಳಲ್ಲಿ ಯಾವುದೇ ದಿನ ಯುಗಾದಿ ಹಾಗೂ ದೀಪಾವಳಿ ಹಬ್ಬಗಳು ಬಂದರೂ ಆ ದಿನ ಬಿಟ್ಟು ನಂತರ ನಂತರದ ದಿನ ಮಾತ್ರ ಆಚರಿಸುತ್ತಾ ಬಂದಿದ್ದಾರೆ. ಆದರೆ ವಿಶೇಷವಾಗಿ ಇಂಗಲವಾಡಿಯಲ್ಲಿ ಮಾತ್ರ ಯುಗಾದಿಯನ್ನು ಹಬ್ಬದ ದಿನವೇ ಆಚರಿಸಿದರೆ ದೀಪಾವಳಿಯನ್ನು ಮಾತ್ರ ಹಬ್ಬದ ಬಳಿಕ ಆಚರಿಸಲಾಗುತ್ತಿದೆ.


ಮಳವಳ್ಳಿ ಮಹದೇಶ್ವರ ದೇವಾಲಯದಲ್ಲಿ ದೀಪಾವಳಿ ಅಮಾವಾಸ್ಯೆಗೆ ಸಿದ್ಧತೆ:
ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಮಳವಳ್ಳಿ ಮಹದೇಶ್ವರ ದೇವಾಲಯದಲ್ಲಿ ದೀಪಾವಳಿ ಅಮಾವಾಸ್ಯೆ ಅಂಗವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದೀಪಾವಳಿ ಅಮಾವಾಸ್ಯೆ ದಿನದಂದು ಮಲೆ ಮಹದೇಶ್ವರಬೆಟ್ಟಕ್ಕೆ ಹೋಗಲಾಗದ ಭಕ್ತರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.


ಈ ಹಿನ್ನೆಲೆಯಲ್ಲಿ ಹುಲಿ ವಾಹನೋತ್ಸವ, ರುದ್ರಾಕ್ಷಿ ವಾಹನೋತ್ಸವ ಹಾಗೂ ಸಾವಿರಾರು ಭಕ್ತರಿಗೆ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಧಾನ ಅರ್ಚಕ ನಂದೀಶ್ ವಿಜಯವಾಣಿಗೆ ತಿಳಿಸಿದ್ದಾರೆ.