ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಸಡಗರ ಕಳೆಕಟ್ಟಿದೆ. ನಗರ ಪಟ್ಟಣ ಪ್ರದೇಶಗಳಲ್ಲಿ ವರಮಹಾಲಕ್ಷ್ಮಿಯನ್ನು ಬರ ಮಾಡಿಕೊಳ್ಳಲು ಜನ ಭರದ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದೆರಡು ದಿನಗಳಿಂದ ಮಳೆಭೀತಿಯಲ್ಲಿದ್ದ ವರ್ತಕರು ನಿರಾಳರಾಗಿದ್ದಾರೆ. ತಡರಾತ್ರಿ ಸುರಿಯುತ್ತಿರುವ ಮಳೆ ಇಡೀ ದಿನ ಬಿಡುವು ನೀಡುತ್ತಿರುವುದರಿಂದ ವ್ಯಾಪಾರ ವಹಿವಾಟಿಗೆ ಲಕ್ಷ್ಮಿಕೃಪೆ ತೋರಿದ್ದಾಳೆ. ಬಿಡುವು ಕೊಟ್ಟು ಅಬ್ಬರಿಸುತ್ತಿರುವ ಮಳೆರಾಯನ ಕೃಪೆಯಿಂದ ಈ ಬಾರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳೂ ಗರಿಗೆದರಿವೆ. ಇದು ಕೃಷಿಕರ ಸಂಭ್ರಮಕ್ಕೆ ಕಾರಣವಾಗಿರುವ ನಡುವೆಯೇ ವರಮಹಾಲಕ್ಷ್ಮಿ ಕಾಲಿಡುತ್ತಿರುವುದು ಮತ್ತಷ್ಟು ಸಂಭ್ರಮಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಬ್ಬದ ಮುನ್ನಾ ದಿನವಾದ ಗುರುವಾರ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಾಗ್ರಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. ಸಾಮಾನ್ಯ ದಿನಗಳಲ್ಲಿ ರಾತ್ರಿ 8 ಗಂಟೆಯೊಷ್ಟೊತ್ತಿಗೆ ಮಾರುಕಟ್ಟೆಗಳಲ್ಲಿ ವ್ಯಾಪಾರ ಬಂದ್ ಆಗುತ್ತಿತ್ತು. ಆದರೆ ಗುರುವಾರ ರಾತ್ರಿ 11 ಗಂಟೆವರೆಗೆ ಹೂ ಹಣ್ಣು ತರಕಾರಿ ಹಾಗೂ ಲಕ್ಷ್ಮೀ ಅಲಂಕಾರದ ಮಳಿಗೆಗಳು ತೆರೆದಿದ್ದು ಗ್ರಾಹಕರೂ ಸಂಭ್ರಮದಿಂದ ವಸ್ತುಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶ್ರಾವಣ ಮಾಸದಲ್ಲಿ ಸಾಲುಸಾಲು ಹಬ್ಬಗಳು ಸಾಲುಗಟ್ಟಲಿದ್ದು, ಮುಖ್ಯವಾಗಿ ಹೆಂಗೆಳೆಯರ ಅಚ್ಚುಮೆಚ್ಚಿನ ಹಬ್ಬ ವರಮಹಾಲಕ್ಷ್ಮೀ ಹಬ್ಬ ಜಿಲ್ಲೆಯಲ್ಲಿ ಕಳೆಕಟ್ಟಿದೆ. ಶುಕ್ರವಾರ ಆ.8ರ ಹಬ್ಬಕ್ಕೆ ಮಹಿಳೆಯರು ಸಡಗರದಿಂದ ಸಿದ್ದತೆ ನಡೆಸುತ್ತಿದ್ದಾರೆ. ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜಿಸಲು ಕಾತುರರಾಗಿದ್ದಾರೆ.
ಮಹಾಲಕ್ಷ್ಮೀ ಮೂರ್ತಿಗೆ ಡಿಮಾಂಡ್: ಈಗಾಗಲೇ ಜಿಲ್ಲೆಯ ಕೇಂದ್ರಭಾಗಗಳಲ್ಲಿ ತರಹೇವಾರಿ ರೂಪದ ವರಮಹಾಲಕ್ಷ್ಮೀ ಮೂರ್ತಿಗಳ ಖರೀದಿ ಜೋರಾಗಿದೆ, ಇತ್ತೀಚಿನ ದಿನಗಳಲ್ಲಿ ವರಮಹಾಲಕ್ಷ್ಮಿ ಮೂರ್ತಿಯನ್ನು ಅಲಂಕರಿಸಿ ಪ್ರತಿಷ್ಟಾಪಿಸುವ ಸಂಸ್ಕೃತಿ ಹೆಚ್ಚಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಂಡುಬರುತ್ತಿದ್ದ ಈ ಸಂಪ್ರದಾಯ ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ಹಬ್ಬಿದೆ. ಈ ಹಿನ್ನೆಲೆಯಲ್ಲಿ ವರಮಹಾಲಕ್ಷ್ಮೀ ಮೂರ್ತಿಗಳಿಗೆ ಡಿಮಾಂಡ್ ಹೆಚ್ಚಿದೆ.
ನೈವೇದ್ಯ ಪದಾರ್ಥಗಳಿಗೆ ಬೇಡಿಕೆ: ಲಕ್ಷ್ಮೀದೇವಿಗೆ ನೈವೇದ್ಯ ರೂಪದಲ್ಲಿ ಕೊಬ್ಬರಿ ಮಿಠಾಯಿ, ರವೆಉಂಡೆ, ಚಕ್ಕುಲಿ, ನಿಪ್ಪಟ್ಟು, ಸಿಹಿಪೂರಿ ಸೇರಿ ಇನ್ನಿತರ ಸಿಹಿ ತಿನಿಸುಗಳನ್ನು ಇಡಲು ಮಹಿಳೆಯರು ಹೆಚ್ಚು ಉತ್ಸುಕತೆ ತೋರುವುದರಿಂದ ಈಗಾಗಲೇ ನಗರ ಪ್ರದೇಶಗಳಲ್ಲಿನ ಸಿಹಿಅಂಗಡಿಗಳಲ್ಲಿ ಭರ್ಜರಿ ವಹಿವಾಟು ನಡೆದಿದೆ. ಅವರವರ ಶಕ್ತಿಗನುಸಾರ ನಡೆಯುವ ಪೂಜೆಕಾರ್ಯಗಳಿಗೆ ಅನುಸಾರವಾಗಿ ಸಿಹಿತಿಂಡಿಗಳ ತಯಾರಿಯೂ ಜೋರಾಗಿದೆ.