ವಿಜಯವಾಣಿ ಸುದ್ದಿಜಾಲ ನಂದಗುಡಿ
ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರುವಲ್ಲಿ ಚಿಣ್ಣರ ಹಬ್ಬವು ಸೂಕ್ತ ವೇದಿಕೆಯಾಗಿದೆ ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ರುದ್ರೇಶ್ ಹೇಳಿದರು.
ನಂದಗುಡಿಯ ಲಿಟ್ಲ್ ಚಾಂಪ್ ಸ್ಕೂಲ್ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಚಿಣ್ಣರ ಹಬ್ಬದಲ್ಲಿ ಮಾತನಾಡಿದರು.
ಈಗಿನ ಮಕ್ಕಳು ಅಗಾಧವಾದ ಪ್ರತಿಭೆ ಹೊಂದಿದ್ದು, ಇದನ್ನು ಗುರುತಿಸಲು ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಪ್ರತಿಭೆ ಹೊರತರಬೇಕಾಗಿದೆ. ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಕಾರದ ಪ್ರತಿಭೆ ತೋರಿ ಸಾಂಸ್ಕೃತಿಕವಾಗಿ ಮುಂದೆ ಬರುವಲ್ಲಿ ಖುಷಿ ಪಡುವ ಹಬ್ಬವಾಗಿದೆ ಎಂದರು.
ಮಕ್ಕಳಲ್ಲಿ ನಿಸರ್ಗದ ಬಗ್ಗೆ ತಿಳಿವಳಿಕೆ ಮೂಡಿಸುವುದು ಹಾಗೂ ಸಮುದಾಯಗಳ ಮಧ್ಯೆ ಕೊಂಡಿ ಬೆಸೆಯುವುದನ್ನು ತಿಳಿ ಹೇಳಬೇಕು. ಜೀವನದಲ್ಲಿ ಅಸಾಧ್ಯವಾದದು ಯಾವುದೂ ಇಲ್ಲ. ನಮ್ಮಲ್ಲಿರುವ ಪ್ರತಿಭೆ ಗುರುತಿಸಿ, ಶಿಸ್ತಿನಿಂದ ಪ್ರಯತ್ನಪಟ್ಟರೆ ಎಲ್ಲವನ್ನು ಸಾಧಿಸಬಹುದು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಫಲಿತಾಂಶವು ಅತ್ಯುತ್ತಮವಾಗಿರುತ್ತದೆ. ಮಕ್ಕಳ ಪ್ರತಿಭೆಯನ್ನು ತಂದೆ-ತಾಯಿಗಳು ಹತ್ತಿರದಿಂದ ಕಣ್ತುಂಬಿಬಿಕೊಳ್ಳುವ ವೇದಿಕೆಯಾಗಿದೆ ಎಂದರು.
ಸ್ವಾಮಿ ವಿವೇಕಾನಂದರ ಅನುಯಾಯಿ ಅಮೃತ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಕ್ಕಳೆಲ್ಲರೂ ವರ್ಣ, ಚಿತ್ತಾರಗಳ ಬಟ್ಟೆಗಳಲ್ಲಿ ಕಾಮನ ಬಿಲ್ಲಿನಂತೆ ಪ್ರಕಾಶಿಸುತ್ತಿದ್ದಾರೆ. ಚಿಣ್ಣರ ಹಬ್ಬವು ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಇದು ಶೈಕ್ಷಣಿಕ ಗುಣಮಟ್ಟದ ಫಲಿತಾಂಶಕ್ಕೂ ಸಹಕಾರಿಯಾಗಲಿದೆ ಎಂದರು.
ಚಿಣ್ಣರಿಗಾಗಿ ವಿವಿಧ ರೀತಿಯ ಆಟೋಟ, ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.