ಜಿಲ್ಲೆ

ರೈತರ ಪಾಲಿಗಿಲ್ಲ ರಸಗೊಬ್ಬರ: ಕೃತಕ ಅಭಾವ ಸೃಷ್ಟಿ

Chikkaballapur

ಎನ್​.ವೆಂಕಟೇಶ್​, ಚಿಕ್ಕಬಳ್ಳಾಪುರ


ಕೃಷಿ ಚಟುವಟಿಕೆ ಬಿರುಸುಗೊಂಡಿರುವುದರ ನಡುವೆ ರೈತರಿಗೆ ಅವಶ್ಯಕವಿರುವ ಗೊಬ್ಬರ ಸಿಗುತ್ತಿಲ್ಲ. ಅಂಗಡಿ ಮಾಲೀಕರು ಎರಡ್ಮೂರು ದಿನಗಳಲ್ಲಿ ದಾಸ್ತಾನು ಬಂದ ತಕ್ಷಣ ಕೊಡುವುದಾಗಿ ವಾಪಸ್​ ಕಳುಹಿಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಯಾವುದೇ ಕೊರತೆ ಇಲ್ಲ ಎನ್ನುತ್ತಾರೆ.


ಇದು ಡಿಎಪಿ ಗೊಬ್ಬರಕ್ಕೆ ಅಂಗಡಿಗಳನ್ನು ಅಲೆದಾಡಿ ಹೈರಾಣದ ರೈತ ಶಶಿಕುಮಾರ್​ ಸೇರಿ ಬಹುತೇಕ ಅನ್ನದಾತರ ಅಳಲು. ಕೃಷಿ ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರದಲ್ಲಿ ಜಿಲ್ಲೆಯಲ್ಲಿ ಅಗತ್ಯ ದಾಸ್ತಾನಿದೆ. ಆದರೆ, ಅನ್ನದಾತ ರೈತರಿಗೆ ಮಾತ್ರ ಗೊಬ್ಬರ ಸಿಗುತ್ತಿಲ್ಲ. ಇದಕ್ಕೆ ಕೃತಕ ಅಭಾವ ಸೃಷ್ಟಿ, ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರುವ ತಂತ್ರಗಾರಿಕೆ, ದಾಸ್ತಾನಿನ ಕೊರತೆ ಮುಚ್ಚಿಡುವ ಹುನ್ನಾರವೇ ಪ್ರಮುಖ ಕಾರಣವಾಗಿದೆ.


ಹೂವು, ಹಣ್ಣು, ತರಕಾರಿ, ಹಾಲು, ರೇಷ್ಮೆಗೆ ಹೆಸರುವಾಸಿಯಾಗಿರುವ ಈ ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಅವಧಿಗೆ ಖುಷ್ಕಿ ಮತ್ತು ನೀರಾವರಿ ಸೇರಿ 1.54 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ಗುರಿಯ ನಿರೀಕ್ಷೆ ಹೊಂದಲಾಗಿದೆ. ಯೂರಿಯಾ 15,784, ಡಿಎಪಿ 7,882, ಎಂಒಪಿ 1929, ಎಸ್​ಎಸ್​ಪಿ 758, ಎನ್​ಪಿಕೆ ಕಾಂಪ್ಲೆಕ್ಸ್​ 24,820 ಸೇರಿದಂತೆ 50,573 ಮೆಟ್ರಿಕ್​ ಟನ್​ ರಸಗೊಬ್ಬರ ಅವಶ್ಯಕತೆ ಇದೆ. ಇದರ ನಡುವೆ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನಿಟ್ಟುಕೊಳ್ಳಲಾಗಿದೆ ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿ.


ಪ್ರಾರಂಭದಿಂದಲೂ ರೈತರಿಂದ ದೂರು
ಮುಂಗಾರು ಅವಧಿ ಪ್ರಾರಂಭದಿಂದಲೂ ಜಿಲ್ಲೆಯಲ್ಲಿ ವ್ಯಾಪಕವಾಗಿ ರಸಗೊಬ್ಬರ ಪೂರೈಕೆ ಸಮಸ್ಯೆ ಕೇಳಿ ಬರುತ್ತಿವೆ. ಇದರ ಬಗ್ಗೆ ಹಲವು ಬಾರಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಬಾಗೇಪಲ್ಲಿಯಲ್ಲಿ ನೂಕಾಡದಿಂದ ಗಲಾಟೆ ಸಹ ನಡೆದಿತ್ತು. ಇದರಿಂದ ರಸಗೊಬ್ಬರ ಅಂಗಡಿ ಮಾಲೀಕರ ಸಭೆ ನಡೆಸಿದ ಕೃಷಿ ಇಲಾಖೆಯು, ನಿಗದಿತ ಬೆಲೆಗಿಂತಲೂ ದುಬಾರಿ ದರಕ್ಕೆ ಮಾರುವ ಮತ್ತು ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿತ್ತು. ಜತೆಗೆ ಕೃಷಿ ಪರಿಕರ ಮಾರಾಟಗಾರರು ರಸಗೊಬ್ಬರ ಮೂಟೆಗಳನ್ನು ಕಡ್ಡಾಯವಾಗಿ ಎಲೆಕ್ಟ್ರಾನಿಕ್​ ತೂಕದ ಯಂತ್ರದ ಮೂಲಕವೇ ತೂಕ ಹಾಕುವಿಕೆ, ಕೃಷಿ ಪರಿಕರ, ರಸಗೊಬ್ಬರಗಳ ದರಗಳನ್ನು ಮಳಿಗೆ ಮುಂಭಾಗದಲ್ಲಿ ಪ್ರಕಟಿಸುವಿಕೆ, ಯೂರಿಯಾ ರಸಗೊಬ್ಬರದೊಂದಿಗೆ ಇತರ ರಸಗೊಬ್ಬರ ಇಲ್ಲವೇ ಲು ಪೋಷಕಾಂಶಗಳನ್ನು ಬೆರಸದಿರುವಿಕೆ ಸೇರಿ ಮಾರ್ಗಸೂಚಿ ನಿಯಮಗಳ ಪಾಲನೆ ಬಗ್ಗೆ ಸೂಚಿಸಿತ್ತು. ಆದರೆ, ಇದನ್ನು ಪ್ರಭಾವಿಗಳು ಅನುಸರಿಸುತ್ತಿಲ್ಲ. ಅಧಿಕಾರಿಗಳ ಕಾರ್ಯಾಚರಣೆ ನಾಟಕದಲ್ಲಿಯೇ ಎಲ್ಲವೂ ಚೆನ್ನಾಗಿದೆ.

ವಿಜಯವಾಣಿ ರಿಯಾಲಿಟಿ ಚೆಕ್​
ಚಿಕ್ಕಬಳ್ಳಾಪುರದ ಟಿಎಪಿಎಂಎಸ್​ ಕಟ್ಟಡದಲ್ಲಿನ ಅಂಗಡಿಯಲ್ಲಿ ಡಿಎಪಿ ಗೊಬ್ಬರ ದಾಸ್ತಾನಿಲ್ಲ ಎಂಬುದಾಗಿ ಮೂರು ದಿನಗಳಿಂದ ರೈತರನ್ನು ವಾಪಸ್​ ಕಳುಹಿಸಲಾಗಿದೆ. ಚಿಂತಾಮಣಿಯಲ್ಲಿ ಫೆಡರೇಷನ್​ನಿಂದಲೇ ಪೂರೈಕೆಯಾಗಿಲ್ಲ ಎನ್ನುತ್ತಿದ್ದರೆ, ಚೇಳೂರು ತಾಲೂಕಿನಲ್ಲಿ ದಾಸ್ತಾನು ಕಡಿಮೆ ಇದೆ ಮತ್ತು ಆಂಧ್ರದಿಂದ ಜನ ಬಂದು ಕಾಳಸಂತೆಯಲ್ಲಿ ಖರೀದಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗುಡಿಬಂಡೆ ತಾಲೂಕಿನಲ್ಲಿ ಕೆಲ ಅಂಗಡಿಗಳಲ್ಲಿ ಮಾತ್ರ ಲಭ್ಯವಿದೆ. ಇಲ್ಲಿ ಯಾವುದೇ ಡೀಲರ್​ ಇಲ್ಲದಿರುವುದರಿಂದ ರಿಟೇಲ್​ ಅಂಗಡಿಯವರು ಗೌರಿಬಿದನೂರು ತಾಲೂಕಿನ ಡೀಲರ್​ಗಳಿಂದ ಖರೀದಿಸುತ್ತಿದ್ದಾರೆ. ಅಲ್ಲಿನ ಸಹಾಯಕ ಕೃಷಿ ನಿರ್ದೇಶಕರು ಬೇರೆ ತಾಲೂಕುಗಳಿಗೆ ಪೂರೈಸದಿರಲು ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಶಿಡ್ಲಟ್ಟದಲ್ಲಿ ಯಾವುದೇ ಕೊರತೆಯಿಲ್ಲ. ತಾಲೂಕಿನ ಎಲ್ಲ ಅಂಗಡಿಗಳು ಸೇರಿದಂತೆ ಹಾಪ್​ ಕಾಮ್ಸ್​ ನಲ್ಲಿ 25 ಮೆಟ್ರಿಕ್​ ಟನ್​ಗೂ ಹೆಚ್ಚು ದಾಸ್ತಾನು ಇದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್​ ತಿಳಿಸಿದ್ದಾರೆ. ಗೌರಿಬಿದನೂರಿನಲ್ಲೂ ಕೊರತೆ ಇಲ್ಲ ಎನ್ನಲಾಗುತ್ತಿದೆ.

ಚಿಕ್ಕಬಳ್ಳಾಪುರದ ಟಿಎಪಿಸಿಎಂಎಸ್​ನ ಮಳಿಗೆಗೆ ಮೂರು ಬಾರಿ ಹೋದಾಗ ಡಿಎಪಿ ದಾಸ್ತಾನು ಇಲ್ಲ. ಮೂರ್ನಾಲ್ಕು ದಿನ ಬಿಟ್ಟು ಬರಲು ಹೇಳಿ, ವಾಪಸ್​ ಕಳುಹಿಸಿದರು.

- ಶಶಿಕುಮಾರ್,​ ರೈತ ಚಿಕ್ಕಬಳ್ಳಾಪುರ